ಸ್ನೇಹದ ಪಯಣಕ್ಕೆ ಸಂಗೀತದ ಶಕ್ತಿ

‘ಲೈಫ್ ಎಲ್ಲಿಂದ ಎಲ್ಲಿಗೆ’ ಚಿತ್ರದ ಹಾಡುಗಳು ಅನಾವರಣ
ಸ್ನೇಹದ ಮೌಲ್ಯವನ್ನು ಕೇಂದ್ರಬಿಂದುವಾಗಿಟ್ಟುಕೊಂಡ ‘ಲೈಫ್ ಎಲ್ಲಿಂದ ಎಲ್ಲಿಗೆ’ ಚಿತ್ರ ಬಿಡುಗಡೆಯತ್ತ ಸಾಗುತ್ತಿದೆ. ಮೂವರು ಆಪ್ತ ಸ್ನೇಹಿತರ ಜೀವನಯಾತ್ರೆಯನ್ನು ಆಧಾರವಾಗಿಟ್ಟುಕೊಂಡ ಈ ಚಿತ್ರ, ಒಟ್ಟಾಗಿ ಹೊರಡುವ ಪ್ರಯಾಣದಲ್ಲಿ ಎದುರಾಗುವ ಅನುಭವಗಳು ಮತ್ತು ಸಂಬಂಧಗಳ ತಿರುವುಗಳನ್ನು ನಿರೂಪಿಸುತ್ತದೆ.

ಭಾವನಾತ್ಮಕತೆಯ ಜೊತೆಗೆ ಮನರಂಜನೆಯ ಸೊಗಡನ್ನು ಹೊಂದಿರುವ ಈ ಚಿತ್ರವನ್ನು ಅರ್ಜುನ್ ಶಿವನ್ ನಿರ್ದೇಶಿಸಿದ್ದಾರೆ. ಲೆನಿನ್, ಮಂಜುನಾಥ್, ಕ್ರಿಶ್ ಮತ್ತು ಅರ್ಜುನ್ ಶಿವನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಅನು ಪ್ರೇಮ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


ವಿಪ್ರ ವೆಂಚರ್ಸ್ ಬ್ಯಾನರ್‌ನಲ್ಲಿ ಮುಳ್ಳೂರು ಗುರುಪ್ರಸಾದ್ ನಿರ್ಮಿಸಿರುವ ಚಿತ್ರದ ಚಿತ್ರೀಕರಣ ಹಾಗೂ ನಂತರದ ಕೆಲಸಗಳು ಪೂರ್ಣಗೊಂಡಿವೆ. ಪ್ರಚಾರದ ಮೊದಲ ಹಂತವಾಗಿ ಬುಧವಾರ ಸಂಜೆ ಚಿತ್ರದ ಎರಡು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ ರಾವ್, ಸುಬ್ರಮಣ್ಯ ಶರ್ಮ, ಇಳಯ ಆಳ್ವ ಗುರೂಜಿ ಸೇರಿದಂತೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.


ಭಾಸ್ಕರ ರಾವ್ ಮಾತನಾಡಿ, ಸಿನಿಮಾ ಮನಸ್ಸಿಗೆ ಆರಾಮ ನೀಡುವ ಶಕ್ತಿಯಿದೆ. ಹಾಡುಗಳು ಚಿತ್ರ ನೋಡುವ ಕುತೂಹಲ ಮೂಡಿಸುತ್ತವೆ ಎಂದರು.


ಕಥೆ, ಚಿತ್ರಕಥೆ ಹಾಗೂ ನಿರ್ದೇಶನದ ಹೊಣೆ ಹೊತ್ತಿರುವ ಅರ್ಜುನ್ ಶಿವನ್, ಇದು ಸ್ನೇಹಿತರ ಜರ್ನಿ ಕಥೆಯ ಸಿನಿಮಾ. ಲಾಕ್‌ಡೌನ್ ಸಮಯದಲ್ಲಿ ಆರಂಭವಾದ ಯೋಚನೆ ಇಂದು ಚಿತ್ರವಾಗಿ ಮೂಡಿದೆ. ಮೈಸೂರಿನಿಂದ ಡೆಲ್ಲಿವರೆಗೆ ಚಿತ್ರೀಕರಣ ನಡೆಸಲಾಗಿದೆ. ಮಾರ್ಚ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
ನಿರ್ಮಾಪಕ ಮುಳ್ಳೂರು ಗುರುಪ್ರಸಾದ್, ಕಥೆ ನನಗೆ ತಕ್ಷಣವೇ ಕನೆಕ್ಟ್ ಆಯಿತು. ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ. ಇದೊಂದು ಸುಂದರ ಜರ್ನಿ ಸಿನಿಮಾ ಎಂದು ಹೇಳಿದರು.


ನಾಯಕ ಲೆನಿನ್ ಇದು ತಮ್ಮ ಮೊದಲ ಚಿತ್ರ ಎಂದರೆ, ನಾಯಕಿ ಅನು ಪ್ರೇಮ ಚಿತ್ರದಲ್ಲಿ ರಿಚಾ ಫರ್ನಾಂಡೀಸ್ ಪಾತ್ರದಲ್ಲಿ ನಟಿಸಿರುವುದಾಗಿ ಹೇಳಿದರು. ಚಿತ್ರಕ್ಕೆ ವೈಶಾಖ ಶಶಿಧರನ್ ಹಾಗೂ ಕಿರಣ್ ವೈಶಿಷ್ಠ ಸಂಗೀತ ಸಂಯೋಜನೆ ನೀಡಿದ್ದು, ಸುಮಂತ್ ಛಾಯಾಗ್ರಹಣ ಮತ್ತು ಮಂಜುಸ್ವಾಮಿ ಕಲಾನಿರ್ದೇಶನ ವಹಿಸಿದ್ದಾರೆ.