ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ ‘ತ್ರಿಕಾರಂ’ ಟೈಟಲ್ ಸಾಂಗ್

ಯದುವೀರ್ ಒಡೆಯರ್ ಬಿಡುಗಡೆಗೊಳಿಸಿದ ಗೀತೆ ವೈರಲ್
ಮೈಸೂರು ಸಂಸ್ಥಾನದ ಯದುವೀರ್ ಒಡೆಯರ್ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿದ ‘ತ್ರಿಕಾರಂ’ ಚಿತ್ರದ ಮೇಕಿಂಗ್ ಟೈಟಲ್ ಸಾಂಗ್ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಚಿತ್ರದ ಬಗ್ಗೆ ಕುತೂಹಲವನ್ನು ಹೆಚ್ಚಿಸಿದೆ. ರಾಜಮನೆತನದ ಕೈಯಿಂದ ಅನಾವರಣಗೊಂಡ ಈ ಗೀತೆ, ಬಿಡುಗಡೆಯಾದ ಕ್ಷಣದಿಂದಲೇ ಪ್ರೇಕ್ಷಕರ ಗಮನ ಸೆಳೆದು, ಚಿತ್ರ ಯಾವಾಗ ತೆರೆಗೆ ಬರುತ್ತದೆ ಎಂಬ ಪ್ರಶ್ನೆಗಳಿಗೆ ದಾರಿ ಮಾಡಿಕೊಟ್ಟಿದೆ.


‘ಆ ದೇವರ ವಂಶದ ಕುಡಿ ಇವನು, ಈ ಮಣ್ಣನ್ನು ಕಾಯಲು ಬಂದವನು’ ಎಂಬ ಅರ್ಥಪೂರ್ಣ ಸಾಲುಗಳಿರುವ ಈ ಶೀರ್ಷಿಕೆ ಹಾಡಿಗೆ ಚೇತನ್ ಕುಮಾರ್ ಜೇಮ್ಸ್ ಸಾಹಿತ್ಯ ಬರೆದಿದ್ದು, ಶಶಾಂಕ್ ಶೇಷಗಿರಿ ಅವರ ಗಾನಧ್ವನಿ ಮತ್ತು ವಿವೇಕ್ ಚಕ್ರವರ್ತಿ ಅವರ ಸಂಗೀತ ಸಂಯೋಜನೆ ಇದೆ. ನಾಯಕ ಎದುರಾಳಿಗಳ ವಿರುದ್ಧ ಸಿಡಿದೇಳುವ ಸಂದರ್ಭಗಳಲ್ಲಿ ಹಿನ್ನೆಲೆಗೀತೆಯಾಗಿ ಈ ಹಾಡು ಬಳಕೆಯಾಗಲಿದೆ. ಚಿತ್ರದ ಶೀರ್ಷಿಕೆಗೆ ಜೊತೆಯಾಗಿ ‘ಇದು ಸ್ಮಶಾನ ಅಲ್ಲ’ ಎಂಬ ಅಡಿಬರಹವೂ ಚಿತ್ರದ ಕಥಾವಸ್ತುವಿನ ಬಗ್ಗೆ ಕುತೂಹಲ ಹುಟ್ಟಿಸಿದೆ.


ಹೊಸದುರ್ಗದ ರಾಜಕೀಯ ಮುಖಂಡ ಹಾಗೂ ನಾಟಕ ಪ್ರೇಮಿ ಜಿ. ಗಣೇಶ್ ಮೂರ್ತಿ ಅವರು ಸದ್ಗುರು ಸಿನಿ ಪ್ರೊಡಕ್ಷನ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದು, ಇದೇ ಚಿತ್ರದಲ್ಲಿ ಖತರ್ನಾಕ್ ಖಳನಾಯಕನ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಹಲವು ನಿರ್ದೇಶಕರ ಬಳಿ ಅನುಭವ ಸಂಪಾದಿಸಿರುವ ಅಜ್ಜಂಪುರದ ದಿಲೀಪ್ ಕುಮಾರ್ ಜೆ.ಆರ್. ಕಥೆ, ಚಿತ್ರಕಥೆ ರಚಿಸಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ.


ಚಿತ್ರದಲ್ಲಿ ಹರ್ಷವರ್ಧನ್ ನಾಯಕನಾಗಿ ಹಾಗೂ ನಿಶ್ವಿತ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಇವರೊಂದಿಗೆ ನಾಗೇಂದ್ರ ಅರಸು, ಬಲರಾಜ್ ವಾಡಿ, ಮಂಜು ಪಾವಗಡ ಸೇರಿದಂತೆ ಅನೇಕ ಕಲಾವಿದರು ಅಭಿನಯಿಸಿದ್ದಾರೆ.


ಚಿತ್ರಕ್ಕೆ ಹೊನ್ನಳ್ಳಿ ಯಾಸಿನ್ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಚಂದ್ರು ಬಂಡೆ ಸಾಹಸ ನಿರ್ದೇಶನ ಹಾಗೂ ಹೈಟ್ ಮಂಜು–ಕಂಬಿರಾಜ್ ನೃತ್ಯ ಸಂಯೋಜನೆ ಇದೆ. ಹಾಡುಗಳಿಗೆ ಡಾ. ವಿ. ನಾಗೇಂದ್ರ ಪ್ರಸಾದ್, ಚೀತು ಕೇಶವ ಮತ್ತು ಪ್ರಮೋದ್ ಮರವಂತೆ ಸಾಹಿತ್ಯ ನೀಡಿದ್ದಾರೆ. ಚಿತ್ರದುರ್ಗ, ಚಿಕ್ಕಮಗಳೂರು, ಮಾರಿಕಣಿವೆ, ಸಾಣೆಹಳ್ಳಿ, ದಾವಣಗೆರೆ, ಸಿರಾ ಮತ್ತು ಮೈಸೂರು ಸೇರಿದಂತೆ ರಾಜ್ಯದ ವಿವಿಧ ಸುಂದರ ತಾಣಗಳಲ್ಲಿ ಸುಮಾರು 50 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಯೋಜನೆಯಂತೆ ಇದೇ ವರ್ಷ ‘ತ್ರಿಕಾರಂ’ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ.