
ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.09: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ಏನೂ ಇಲ್ಲ, ಇದರಲ್ಲಿ ಉಪ್ಪು, ಹುಳಿ, ಖಾರ ಏನೂ ಇಲ್ಲ, ಬರಿ ಖಾಲಿ ಚಂಬು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ ಅವರು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿದ ಅವರು, ಸಿ.ಎಂ.ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ, ಪಂಚ ಗ್ಯಾರಂಟಿ ಯೋಜನೆಗಳಿಗೆ ಹಣ ಹಿಂಡಿಸಲಾಗದೆ ಹೆಣಗಾಡುತ್ತಿದೆ, ಇದನ್ನು ಸರಿಪಡಿಸಲು, ನೋಂದಣಿ ಕಚೇರಿಯಲ್ಲಿ ಶುಲ್ಕ ಹೆಚ್ಚಳ, ವಿದ್ಯುತ್ ದರ ಏರಿಕೆ, ಹಾಲು ಹಾಗೂ ಅದರ ಉತ್ಪನ್ನಗಳ ದರ ಏರಿಕೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ, ಬಡ ಜನರ ನೆಮ್ಮದಿ ಹಾಳು ಮಾಡುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಸಿ.ಎಂ.ಸಿದ್ದರಾಮಯ್ಯ ಅವರು, 4.5 ಲಕ್ಷ ಕೋಟಿ ರೂ.ಬಜೆಟ್ ಮಂಡಿಸಿದ್ದಾರೆ. ರೈತರಿಗೆ, ಮಹಿಳೆಯರಿಗೆ, ವೃದ್ಧರಿಗೆ, ಯುವಕ, ಯುವತಿಯರಿಗೆ ಯಾವುದೇ ಕೊಡುಗೆಗಳನ್ನು ನೀಡಿಲ್ಲ, ನಿರುದ್ಯೋಗ ವಿದ್ಯಾವಂತರು ಸಾಕಷ್ಟು ಜನರಿದ್ದು, ಉದ್ಯೋಗಕ್ಕಾಗಿ ಹರಸಾಹ ಪಡುತ್ತಿದ್ದಾರೆ. ಅರ್ಹ ವಿದ್ಯಾವಂತರು ಸರ್ಕಾರಿ ಉದ್ಯೋಗಕ್ಕಾಗಿ ಅರ್ಜಿ ಹಾಕಿ ಹಾಕಿ, ಹೈರಾಣರಾಗಿದ್ದು, ನೇಮಕ ಪ್ರಕ್ರಿಯೆಗೆ ಸರ್ಕಾರ ಇಲ್ಲಿವರೆಗೆ ಮುಂದಾಗಿಲ್ಲ, ನಾನಾ ಅಭಿವೃದ್ದಿ ಕೆಲಸ ಕಾರ್ಯಗಳನ್ನು ಮಾಡಿದ ರಾಜ್ಯದ ಗುತ್ತಿಗೆದಾರರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಹಣ ಪಾವತಿಸಿಲ್ಲ, ಸಾವಿರಾರು ಕೋಟಿ ಹಣ ಪಾವತಿ ಮಾಡಬೇಕಾಗಿದ್ದು, ಅನಿವಾರ್ಯವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುತ್ತಿಗೆದಾರರು ಸಿಡಿದೆದ್ದಿದ್ದಾರೆ. ಸರ್ಕಾರ ಕೇವಲ ಭರವಸೆ ನೀಡುವುದರಲ್ಲಿ ಕಾಲಹರಣ ಮಾಡುತ್ತಿದೆ, ಹೊರತು ಇಲ್ಲಿವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. ಬಜೆಟ್ ನಲ್ಲಿ ಮಕ್ಕಳಿಗೆ ಸೋಶಿಯಲ್ ಮೀಡಿಯ ಬ್ಯಾನ್ ಮಾಡಿರುವುದು ಒಳ್ಳೆಯ ಕೆಲಸ, ಇದನ್ನು ಸ್ವಾಗತಿಸುವೆ. ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ 33 ಗೇಟ್ ಗಳನ್ನು ಮುಂಗಾರು ಮುನ್ನವೇ ಬದಲಾಯಿಸುವ ನಿರ್ಧಾರವನ್ನು ಸ್ವಾಗತಿಸುವೆ. ಆದರೆ, ಮುಖ್ಯವಾಗಿ ಮಕ್ಕಳ ಶಿಕ್ಷಣ, ಆರೋಗ್ಯ, ವಿದ್ಯಾವಂತರಿಗೆ ನೌಕರಿ ಭಾಗ್ಯ, ಬಡವರಿಗೆ ಅನುಕೂಲವಾಗುವ ಯೋಜನೆಗಳು ಸೇರಿದಂತೆ ಕನಿಷ್ಠ ಮೂಲ ಸೌಕರ್ಯಕ್ಕಾಗಿ ಯಾವುದೇ ಯೋಜನೆಗಳನ್ನು ಬಜೆಟ್ ನಲ್ಲಿ ಪ್ರಕಟಿಸಿಲ್ಲ, ಸಿ.ಎಂ.ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಖಾಲಿ ಚಂಬು ಇದ್ದಂತೆ ಎಂದು ವಾಗ್ದಾಳಿ ನಡೆಸಿದ್ದಾರೆ.






























