
ಪುತ್ತೂರು; ಸರ್ಕಾರಿ ಅಧಿಕಾರಿಯೊಬ್ಬರ ಸಹಿಯನ್ನೇ ಪೋರ್ಜರಿ ಮಾಡಿರುವ ಪ್ರಕರಣ ನೆಕ್ಕಿಲಾಡಿ ಗ್ರಾಪಂ ಗ್ರಾಮಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಯಿತು. ಈ ಘಟನೆಯ ಹಿಂದೆ ಇರುವ ಕಳ್ಳರು ಯಾರು. ಇದೊಂದು ಕಳಂಕ ತರುವ ವಿಚಾರವಾಗಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಅವರಿಗೆ ಪತ್ರ ಬರೆಯುವ ನಿರ್ಣಯ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ ಘಟನೆಯೂ ನಡೆಯಿತು.
ನೆಕ್ಕಿಲಾಡಿಯ ಗ್ರಾಪಂ ಅಧ್ಯಕ್ಷೆ ಸುಜಾತ ರೈ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಸಹಿ ಪೋರ್ಜರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ನೆಕ್ಕಿಲಾಡಿಯ ಎರಡು ಏಕ ನಿವೇಶನ ವಾಣಿಜ್ಯ ವಿನ್ಯಾಸದ ನಕ್ಷೆಗಳ ವಿಚಾರಕ್ಕೆ ಸಂಬಂಧಿಸಿ ಈ ಸಹಿ ಪೋರ್ಜರಿ ಮಾಡಲಾಗಿದೆ. ಈ ವಿನ್ಯಾಸ ನಕ್ಷೆಗಳನ್ನು ರದ್ದು ಮಾಡಲಾಗಿದೆ ಎಂದು ಪೂಡಾ ಸದಸ್ಯ ಕಾರ್ಯದರ್ಶಿ ಅವರೇ ಗ್ರಾಪಂಗೆ ಪತ್ರ ಬರೆದಿದ್ದಾರೆ ಎಂಬ ಮಾಹಿತಿ ನಿಜವಾ ಎಂದು ಅನಿ ಮಿನೇಜಸ್ ಪ್ರಶ್ನಿಸಿದರು. ಈ ಪೋರ್ಜರಿ ಪ್ರಕರಣದ ಹಿಂದೆ ಇರುವ ಕಾಣದ ಕೈಗಳು ಯಾರು. ಇಂತಹ ಘಟನೆಗಳು ಗ್ರಾಪಂಗೆ ಕಪ್ಪುಚುಕ್ಕೆ. ಪೋರ್ಜರಿ ಕಡತಗಳು ಗ್ರಾಪಂನಲ್ಲಿ ಇದ್ದರೆ ಅದಕ್ಕೆ ಹೊಣೆ ಯಾರು. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಹೇಳಿದರು.
ಈ ಬಗ್ಗೆ ಗ್ರಾಪಂ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಅವರು ಮಾಹಿತಿ ನೀಡಿ, ನೆಕ್ಕಿಲಾಡಿ ಗ್ರಾಮದ ಸರ್ವೆ ನಂಬ್ರ ೫೪/೧ರಲ್ಲಿ ಕಲ್ಪನಾ ಎಚ್.ಪಿ ಅವರ ೧೦ ಸೆಂಟ್ಸ್ ಹಾಗೂ ನಾಗೇಶ್ ಕೆ ಅವರಿಗೆ ಸೇರಿದ ೬ ಸೆಂಟ್ಸ್ ಜಮೀನಿನ ಏಕ ನಿವೇಶನ ವಾಣಿಜ್ಯ ವಿನ್ಯಾಸ ನಕ್ಷೆಗಳಲ್ಲಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅವರ ಸಹಿಯನ್ನು ಪೋರ್ಜರಿ ಮಾಡಲಾಗಿದೆ. ತಪ್ಪು ಮಾಹಿತಿ ನೀಡಿ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆದುಕೊಂಡಿರುವುದಾಗಿ ಪುಡಾ ಕಾರ್ಯದರ್ಶಿ ಅವರು ಗ್ರಾಪಂಗೆ ಪತ್ರ ಬರೆದಿದ್ದಾರೆ. ಈ ವಿನ್ಯಾಸ ನಕ್ಷೆಗಳನ್ನು ರದ್ದು ಮಾಡಲಾಗಿದೆ. ಈ ವಿನ್ಯಾಸಕ್ಕೆ ನೀಡಲಾದ ೯/೧೧ ನ್ನು ರದ್ದು ಮಾಡುವಂತೆ ಅವರು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಬಗ್ಗೆ ಮುಹಮ್ಮದ್ ರಫೀಕ್ ಮಾತನಾಡಿ, ೯/೧೧ ರದ್ದು ಮಾಡಿದ್ದೀರಾ ಎಂದು ಪ್ರಶ್ನಿಸಿದರು. ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ಅಭಿವೃದ್ಧಿ ಅಧಿಕಾರಿ ತಿಳಿಸಿದರು. ರೂಪೇಶ್ ರೈ ಅಲಿಮಾರ್ ಅವರು ಮಾತನಾಡಿ, ಈ ಪ್ರಕರಣದಲ್ಲಿನ ಕಳ್ಳರನ್ನು ಪತ್ತೆ ಹಚ್ಚುವ ಕೆಲಸವಾಗಬೇಕು ಎಂದರು.
sವೇದಿಕೆಯಲ್ಲಿ ಉಪಾಧ್ಯಕ್ಷರಾದ ಹರೀಶ್ ಡಿ., ಸದಸ್ಯರಾದ ವಿಜಯಕುಮಾರ್, ಪ್ರಶಾಂತ್ ಎನ್., ಕೆ. ರಮೇಶ್ ನಾಕ್, ವೇದಾವತಿ, ಗೀತಾ, ತುಳಸಿ, ಸ್ವಪ್ನ, ರತ್ನಾವತಿ, ಹರೀಶ್ ಕೆ. ಉಪಸ್ಥಿತರಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾಶ್ರೀ ಶೆಣೈ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ಗ್ರಾಮಸ್ಥರಾದ ರಶೀದಾ, ಝಕಾರಿಯಾ ಕೊಡಿಪ್ಪಾಡಿ, ಅರುಣ್ ಬಿ., ಮುಹಮ್ಮದ್ ಸಾದಿಕ್, ಶರೀಫ್ ಮತ್ತಿತರರು ಮಾತನಾಡಿ, ಸಲಹೆ ಸೂಚನೆ ನೀಡಿದರು. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸ್ವಾಗತಿಸಿದರು. ಸಹಾಯಕ ಲೆಕ್ಕ ಸಹಾಯಕ ದೇವಪ್ಪ ನಾಯ್ಕ್ ವಂದಿಸಿದರು.