ಸಂಜೆವಾಣಿ ನ್ಯೂಸ್
ಮೈಸೂರು: ಮೇ.19:- ಸಚಿವನಾಗಲು ನನಗೂ ಆಸೆ ಇದೆ. ನಾನು ಕೂಡ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿ ಎಂದು ಉಪ ಸಭಾಪತಿ ರುದ್ರಪ್ಪ ಲಮಾಣಿ ಹೇಳಿದರು.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಅವಧಿಯಲ್ಲೇ ನಾನು ಸಚಿವನಾಗಬೇಕಿತ್ತು. ನಮ್ಮ ಸಮುದಾಯ ಚುನಾವಣೆಯಲ್ಲಿ ನಿರಂತರವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದೆ. ಆ ಸಮುದಾಯದ ಪ್ರತಿನಿಧಿಯಾಗಿ ನಾನಿದ್ದೇನೆ. ಹೀಗಾಗಿ ಸಚಿವ ಸ್ಥಾನ ನನಗೆ ನೀಡುತ್ತಾರೆ ಎನ್ನುವ ಭರವಸೆ ಇದೆ ಎಂದರು.
ಕಳೆದ ಸಂಪುಟದಲ್ಲಿ ಸಚಿವ ಸ್ಥಾನದ ಲಿಸ್ಟ್ ನಲ್ಲಿ ನನ್ನ ಹೆಸರಿತ್ತು. ಅಂತಿಮ ಕ್ಷಣದಲ್ಲಿ ಹೆಸರನ್ನು ಬದಲಿಸಲಾಯಿತು. ಪಕ್ಷದ ನಾಯಕರು ನನ್ನನ್ನು ಮನವೊಲಿಸಿ ಉಪಸಭಾಪತಿ ಸ್ಥಾನ ನೀಡಿದರು. ಮುಂದಿನ ಸಂಪುಟದಲ್ಲಿ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ನನಗೆ ಸಚಿವ ಸ್ಥಾನ ನೀಡುವ ಭರವಸೆ ಇದೆ ಎಂದು ತಿಳಿಸಿದರು.
ಯಾವಾಗ ಸಂಪುಟ ವಿಸ್ತರಣೆ ಆಗುತ್ತದೆಯೊ ಅಂದೇ ಸಚಿವ ಸ್ಥಾನ ನೀಡಲಿ. ಎಲ್ಲರಿಗೂ ಆಸೆ ಇರುವಂತೆ ನನಗೂ ಸಚಿವನಾಗುವ ಆಸೆ ಇದೆ ಎಂದು ಇಚ್ಛೆ ವ್ಯಕ್ತಪಡಿಸಿದರು.