ವಿನಾಶ ಕಾಲೆ ಎಂಬ ಗಾದೆಯಿಂದ ಹುಟ್ಟಿದ ಚಿತ್ರಶೀರ್ಷಿಕೆ

ಹಾರರ್–ಥ್ರಿಲ್ಲರ್‌ಗೆ ಮುಹೂರ್ತ
ಬ ಗಾದೆ ಮಾತುಗಳು ಕಾಲಕಾಲಕ್ಕೂ ಸತ್ಯವಾಗುತ್ತಲೇ ಬಂದಿವೆ. ಅದೇ ಸತ್ಯವನ್ನು ಕಥಾವಸ್ತುವಾಗಿ ಪರಿಗಣಿಸಿ, ‘ವಿನಾಶ ಕಾಲೆ ವಿಪರೀತ ಬುದ್ಧಿ’ ಎಂಬ ಗಾದೆಯಲ್ಲಿನ ‘ವಿನಾಶ ಕಾಲೆ’ ಎಂಬ ಎರಡು ಶಬ್ದಗಳನ್ನು ಶೀರ್ಷಿಕೆಯಾಗಿ ಇಟ್ಟುಕೊಂಡು ಹೊಸ ಚಿತ್ರವೊಂದು ಆರಂಭವಾಗಿದೆ. ಶಕ್ತಿ ಫಿಲಿಂಸ್ ನಿರ್ಮಾಣದಲ್ಲಿ, ತುಮಕೂರು ಮೂಲದ ಎಸ್. ಕಿರಣ್ ಕುಮಾರ್ ಕಥೆ–ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದ ಮುಹೂರ್ತ ಸಮಾರಂಭವು ಗಣರಾಜ್ಯೋತ್ಸವ ದಿನ ರಾಜಾಜಿನಗರದ ಕೈಗಾರಿಕಾ ಕೇಂದ್ರದಲ್ಲಿರುವ ಮದ್ದುರಮ್ಮ ದೇವಿ ಮತ್ತು ಯಲ್ಲಮ್ಮ ದೇವಿ ಸನ್ನಿಧಿಯಲ್ಲಿ ನೆರವೇರಿತು.


ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಬಾ. ಮ. ಹರೀಶ್ ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿಗ್ ಬಾಸ್ ಸ್ಪರ್ಧಿಗಳಾದ ಡಾಗ್ ಸತೀಶ್, ಮಲ್ಲಮ್ಮ, ಕರಿಬಸಪ್ಪ ಉಪಸ್ಥಿತರಿದ್ದರು.


ಚಿತ್ರದಲ್ಲಿ ಪಾವನಿಸಿರಿ, ರಿಷಿಕ ಗೌಡ, ವೈಷ್ಣವಿ, ಶ್ರೀನಿಧಿ, ರಚನಾ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಶೋಭಾ (ಮಾಂತ್ರಿಕಳ ಪಾತ್ರ), ಮಂಡ್ಯಸಿದ್ದು (ಅಘೋರಿ ಪಾತ್ರ) ಹಾಗೂ ಬಿಗ್ ಬಾಸ್ ಖ್ಯಾತಿಯ ಮಲ್ಲಮ್ಮ, ಪ್ರವಲಿಕ, ದಿಶಾ ಸೇರಿದಂತೆ ಹಲವರು ಅಭಿನಯಿಸುತ್ತಿದ್ದಾರೆ. ಐದು ಯುವತಿಯರ ಆಯ್ಕೆ ಈಗಾಗಲೇ ಮುಗಿದಿದ್ದು, ಉಳಿದ ಪುರುಷ ಪಾತ್ರಗಳ ಆಯ್ಕೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳ್ಳಲಿದೆ.


ಮಾರ್ಚ್ ತಿಂಗಳಿಂದ ಸುಮಾರು 30 ದಿನಗಳ ಕಾಲ ಬೆಂಗಳೂರು ಮತ್ತು ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜಿಸಿದೆ. ಚಿತ್ರಕ್ಕೆ ಮಂಜುಕವಿ ಅವರ ಸಾಹಿತ್ಯ–ಸಂಗೀತ, ವಿನಯ್ ಗೌಡ ಛಾಯಾಗ್ರಹಣ, ಜೀವನ್ ಸಂಕಲನ, ವಿನು ಮನಸು ಹಿನ್ನಲೆ ಶಬ್ದ, ಜಗ್ಗು–ಬಾಲು ನೃತ್ಯ ಸಂಯೋಜನೆ ಹಾಗೂ ದೇವು ಅವರ ಪ್ರಚಾರಕಲೆ ಇದೆ.


ನಿರ್ದೇಶಕ ಎಸ್. ಕಿರಣ್ ಕುಮಾರ್ ಮಾತನಾಡಿ “ಇದು ಅಗಲಿದ ನನ್ನ ಗೆಳೆಯನ ಜೀವನದಲ್ಲಿ ನಡೆದಂತ ನಿಜ ಘಟನೆ ಆಧಾರಿತ ಕಥೆ. ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬೇಕೆಂಬ ದುರಾಸೆಯಿಂದ ದೈವಿಕ ಶಕ್ತಿಗಳೊಂದಿಗೆ ಆಟವಾಡಿದರೆ ಏನೆಲ್ಲ ಅನಾಹುತಗಳು ಸಂಭವಿಸಬಹುದು ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದೇವೆ.

ಮಧ್ಯಮ ವರ್ಗದ ಕುಟುಂಬಗಳಿಂದ ಬಂದ ಐದು ಹುಡುಗರು–ಹುಡುಗಿಯರು ಉದ್ಯೋಗಕ್ಕಾಗಿ ನಗರಕ್ಕೆ ಬರುತ್ತಾರೆ. ಕಡಿಮೆ ಸಂಬಳ, ಹೆಚ್ಚುತ್ತಿರುವ ಆಸೆಗಳು ಅವರನ್ನು ತಪ್ಪು ದಾರಿಯತ್ತ ಒಯ್ಯುತ್ತವೆ. ಆ ಬಳಿಕ ಎದುರಾಗುವ ಭಯಾನಕ ಪರಿಣಾಮಗಳನ್ನು ಹಾರರ್–ಥ್ರಿಲ್ಲರ್ ಶೈಲಿಯಲ್ಲಿ, ಧಾರ್ಮಿಕತೆಯ ನೆರಳಿನಲ್ಲಿ ಕಟ್ಟಿಕೊಡಲಾಗಿದೆ. ಕಥೆಯೊಂದು ಹಂತದಲ್ಲಿ ಅಘೋರಿ ಮತ್ತು ಮಾಂತ್ರಿಕನ ಪಾತ್ರಗಳು ತೆರೆದುಕೊಳ್ಳುತ್ತವೆ” ಎಂದು ವಿವರಿಸಿದರು.