
ಕುಂದಾಪುರ-ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಸಹಿತ ಒಳಗಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾದ ಘಟನೆ ಶನಿವಾರ ತಡರಾತ್ರಿ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಸಮೀಪದ ಹಂದಕುಂದ ಎಂಬಲ್ಲಿ ಸಂಭವಿಸಿದೆ.
ಹಂದಕುಂದ ಅರೆಕಲ್ಲು ಮನೆಯ ಗಣಪು ಶೆಡ್ತಿ ಅವರ ಮನೆಯು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಸಂಪೂರ್ಣ ಹಾನಿಯಾಗಿದೆ.
ಮನೆಯ ಮಾಡು, ಗೋಡೆಗೂ ಹಾನಿಯಾಗಿದ್ದು, ಒಳಗಿದ್ದ ಸ್ವಲ್ಪ ಚಿನ್ನಾಭರಣ, ನಗದು, ಟಿವಿ, ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಬರೆ, ಪಾತ್ರೆಗಳೆಲ್ಲವೂ ಸುಟ್ಟು ಕರಕರಲಾಗಿದೆ. ೫ ಲಕ್ಷ ರೂ. ಗೂ ಮಿಕ್ಕಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಗಣಪು ಶೆಡ್ತಿ ಹಾಗೂ ಅವರ ಮೊಮ್ಮಗ ಮಾತ್ರ ಈ ಮನೆಯಲ್ಲಿದ್ದು, ಶನಿವಾರ ರಾತ್ರಿ ಮನೆಯ ಹತ್ತಿರದ ಮನೆಯೊಂದರಲ್ಲಿ ಭಜನಾ ಕಾರ್ಯಕ್ರಮ ಇದ್ದುದರಿಂದ ಬೀಗ ಹಾಕಿ ಅಲ್ಲಿಗೆ ತೆರಳಿದ್ದರು. ರಾತ್ರಿ ೧೨ ಗಂಟೆ ನಂತರ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನಲಾಗಿದ್ದು, ೨ ಗಂಟೆಯ ಸುಮಾರಿಗೆ ಆ ಮನೆಯ ಹತ್ತಿರದ ದಾರಿಯಲ್ಲಿ ಹೋಗುತ್ತಿದ್ದವರೊಬ್ಬರು ನೋಡಿ, ಎಲ್ಲರಿಗೂ ವಿಷಯ ತಿಳಿಸಿದ್ದಾರೆ. ಅಷ್ಟರೊಳಗೆ ಮನೆಯ ಬಹುತೇಕ ಭಾಗ ಸುಟ್ಟು ಹೋಗಿತ್ತು. ಬಳಿಕ ಕುಂದಾಪುರದ ಅಗ್ನಿ ಶಾಮಕ ದಳದ ತಂಡದವರು, ಸ್ಥಳೀಯರೆಲ್ಲ ಸೇರಿ, ಹತ್ತಿರದಲ್ಲಿದ್ದ ದನದ ಕೊಟ್ಟಿಗೆಗೆ ಬೆಂಕಿ ಹರಡವುದನ್ನು ತಪ್ಪಿಸಿದ್ದಾರೆ.























