ರಾಜತಾಂತ್ರಿಕ ಚರ್ಚೆಗೆ ಮುನ್ನ ಅಮೆರಿಕ ದಾಳಿ ನಿಲ್ಲಿಸಲಿ: ಇರಾನ್

ಟೆಹರಾನ್, ಜೂ,30- ಇರಾನ್ ಜೊತೆಗೆ ರಾಜತಾಂತ್ರಿಕ ಮಾತುಕತೆ ನಡೆಸಲು ಬಯಸಿದರೆ ಅಮೆರಿಕಾ ಯಾವುದೇ ದಾಳಿ ಮಾಡುವುದನ್ನು ಮೊದಲು ನಿಲ್ಲಿಸಬೇಕು ಆಗ ಮಾತ್ರ ಮಾತುಕತೆ ನಡೆಸಲು ಸಹಕಾರಿಯಾಗುತ್ತದೆ ಇರಾನ್ ಉಪ ವಿದೇಶಾಂಗ ಸಚಿವ ಮಜೀದ್ ತಖ್ತ್-ರಾವಂಚಿ ತಿಳಿಸಿದ್ದಾರೆ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಮಧ್ಯವರ್ತಿಗಳ ಮೂಲಕ ಇರಾನ್ ಜೊತೆ ಮಾತುಕತೆ ನಡೆಸಲು ಬಯಸುತ್ತಿದೆ, ಆದರೆ ದಾಳಿ ನಡೆಯುತ್ತಿರುವ ಸಮಯದಲ್ಲಿ ಮಾತುಕತೆ ನಡೆಸಲು ಹೇಗೆ ಸಾಧ್ಯ, ಅಮೆರಿಕಾ ದಾಳಿ ನಡೆಸುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದಿದ್ದಾರೆ.


ಇರಾನ್ ರಹಸ್ಯವಾಗಿ ಪರಮಾಣು ಬಾಂಬ್ ಅಭಿವೃದ್ಧಿಪಡಿಸುತ್ತಿದೆ ಎನ್ನುವ ಆರೋಪವನ್ನು ತಳ್ಳಿ ಹಾಕಿರುವ ಅವರು ಶಾಂತಿಯುತ ಉದ್ದೇಶಗಳಿಗಾಗಿ ಯುರೇನಿಯಂ ಉತ್ಕೃಷ್ಟಗೊಳಿಸಲು ಸಾಧ್ಯವಾಗಿಸುವುದು ನಮ್ಮ ಉದ್ದೇಶ ಎಂದಿದ್ದಾರೆ.


ಅಮೆರಿಕದ ದಾಳಿಗಳಿಂದ ಇರಾನ್‍ನ ಪರಮಾಣು ಕಾರ್ಯಕ್ರಮಕ್ಕೆ ಉಂಟಾದ ಹಾನಿಯ ಪ್ರಮಾಣ ಸ್ಪಷ್ಟವಾಗಿಲ್ಲ ಮತ್ತು ನಿಖರವಾದ ಅಂದಾಜು ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಜೂನ್ 13 ರ ಮುಂಜಾನೆ ಪ್ರಾರಂಭವಾದ ಇಸ್ರೇಲ್‍ನ ಮಿಲಿಟರಿ ಕಾರ್ಯಾಚರಣೆಯ ಎರಡು ದಿನಗಳ ನಂತರ ಮಸ್ಕತ್‍ನಲ್ಲಿ ನಡೆಯಬೇಕಿದ್ದ ಆರನೇ ಸುತ್ತಿನ ಪ್ರಮುಖ ಪರೋಕ್ಷ ಮಾತುಕತೆ ರದ್ದುಗೊಳಿಸಿತ್ತು. ಈ ನಡುವೆ ಮತ್ತೊಮ್ಮೆ ಮಾತುಕತೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


ಮೂರು ಇರಾನಿನ ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕಾ ಬಾಂಬ್ ದಾಳಿ ನಡೆಸಿತ್ತು. ಇದರಿಂದ ಇರಾನ್‍ನ ಪರಮಾಣು ಕೇಂದ್ರಗಳಿಗೆ ಹಾನಿ ಆಗಿದೆ ಎಂದು ಅಮೇರಿಕಾ ಹೇಳಿದೆ, ಇರಾನ್ ಇದನ್ನು ನಿರಾಕರಿಸಿದೆ.


ಇರಾನ್ ಕ್ಷಿಪಣಿಗಳೊಂದಿಗೆ ಇಸ್ರೇಲ್ ಮೇಲೆ ದಾಳಿ ಮಾಡುವ ಮೂಲಕ ತಿರುಗೇಟು ನೀಡಿದೆ. ಈ ಮೂಲಕ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಹೊಸ ರೂಪ ಪಡೆದಿತ್ತು.


ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಮುಖ್ಯಸ್ಥ ರಾಫೆಲ್ ಗ್ರೋಸಿ, ಅಮೇರಿಕಾ ನಡೆಸಿದ ದಾಳಿಗಳು ತೀವ್ರವಾಗಿದ್ದು ಇದು ಖಂಡನಾರ್ಹ ಎಂದಿದ್ದಾರೆ.
ಅಮೇರಿಕಾ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿದ್ದು “ಕೆಲವೇ ತಿಂಗಳುಗಳಲ್ಲಿ” ಇರಾನ್ ಮತ್ತೆ ಯುರೇನಿಯಂ ಅನ್ನು ಪುಷ್ಟೀಕರಿಸುವ ಸಾಮಥ್ರ್ಯ ಹೊಂದಿದೆ ಎಂದು ಹೇಳಿದ್ದಾರೆ.