ರಾಘವೇಂದ್ರ ಚಿತ್ರವಾಣಿಗೆ ಸಂಸ್ಥೆಗೆ 50ರ ಸಂಭ್ರಮ : ಲೋಗೋ ಅನಾವರಣ

ಪ್ರಚಾರ ಪರಂಪರೆಯ ಪಿತಾಮಹ ಡಿ.ವಿ. ಸುಧೀಂದ್ರ ಸ್ಥಾಪಿಸಿದ ಸಂಸ್ಥೆ

ಇಂದು ಕನ್ನಡ ಚಿತ್ರರಂಗದಲ್ಲಿ ಪ್ರಚಾರ ಎಂಬುದು ಅವಿಭಾಜ್ಯ ಅಂಶವಾಗಿದ್ದರೆ, ಅದರ ಅಡಿಪಾಯವನ್ನು ಅರ್ಧ ಶತಮಾನಕ್ಕೂ ಹಿಂದೆಯೇ ಹಾಕಿದವರು ಕನ್ನಡದ ಮೊದಲ ಪತ್ರಿಕಾ ಪ್ರಚಾರಕರ್ತ ಡಿ.ವಿ. ಸುಧೀಂದ್ರ. 1976ರಲ್ಲಿ ಅವರು ಸ್ಥಾಪಿಸಿದ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಇದೀಗ 50ನೇ ವರ್ಷಕ್ಕೆ ಕಾಲಿಟ್ಟಿದ್ದು, ಮೂರು ಸಾವಿರಕ್ಕೂ ಅಧಿಕ ಚಿತ್ರಗಳಿಗೆ ಪ್ರಚಾರ ನೀಡಿದ ಅಪರೂಪದ ಸಾಧನೆಯೊಂದಿಗೆ ಸುವರ್ಣ ಸಂಭ್ರಮ ಆಚರಣೆಗೆ ಸಜ್ಜಾಗಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಪ್ರಚಾರ ಸಂಸ್ಥೆಯೊಂದು ಐದು ದಶಕಗಳ ಕಾಲ ಸಕ್ರಿಯವಾಗಿ ಕಾರ್ಯನಿರ್ವಹಿಸಿರುವುದು ಇದೇ ಮೊದಲು ಎಂಬುದು ವಿಶೇಷ.


ಈ ಸುವರ್ಣ ಸಂಭ್ರಮದ ಪೂರ್ವಭಾವಿಯಾಗಿ ಇತ್ತೀಚೆಗೆ ಆಯೋಜಿಸಿದ್ದ ಸಮಾರಂಭದಲ್ಲಿ ರಾಘವೇಂದ್ರ ಚಿತ್ರವಾಣಿಯ 50ನೇ ವರ್ಷದ ಲೋಗೊ ಅನಾವರಣ ನಡೆಯಿತು. ಹಿರಿಯ ನಟ ಜೆ.ಕೆ. ಶ್ರೀನಿವಾಸಮೂರ್ತಿ, ನಟ ಕೋಮಲ್ ಕುಮಾರ್ ಹಾಗೂ ನಟಿ ಅನು ಪ್ರಭಾಕರ್ ಮುಖರ್ಜಿ ಲೋಗೊ ಬಿಡುಗಡೆ ಮಾಡಿ ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಡಿ.ವಿ. ಸುಧೀಂದ್ರ ಅವರ ಪತ್ನಿ ಪದ್ಮ ಸುಧೀಂದ್ರ ಉಪಸ್ಥಿತರಿದ್ದರು.


ಮಾತನಾಡಿದ ಜೆ.ಕೆ. ಶ್ರೀನಿವಾಸಮೂರ್ತಿ, “ನನಗೆ ಚಿತ್ರರಂಗಕ್ಕೆ ಬಂದೂ 50 ವರ್ಷ. ಅಂದಿನಿಂದಲೂ ಸುಧೀಂದ್ರ ಅವರೊಂದಿಗೆ ಒಡನಾಟ ಇದೆ. ಪ್ರಚಾರ ಸಂಸ್ಥೆಯೊಂದು ಇಷ್ಟು ವರ್ಷಗಳ ಕಾಲ ಸಕ್ರಿಯವಾಗಿರುವುದು ಹೆಮ್ಮೆಯ ಸಂಗತಿ. ರಾಘವೇಂದ್ರ ಚಿತ್ರವಾಣಿ ನೂರು ವರ್ಷಗಳ ಸಂಭ್ರಮವನ್ನೂ ಕಾಣಲಿ” ಎಂದು ಹಾರೈಸಿದರು.


ನಟ ಕೋಮಲ್ ಕುಮಾರ್, “ನನ್ನ ಮೇಲೆ ನಂಬಿಕೆ ಇಟ್ಟು ಹಾರೈಸಿದವರು ಸುಧೀಂದ್ರ ಅವರು. ಅವರ ನಂತರ ವೆಂಕಟೇಶ್ ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಕುಟುಂಬದ ಸಹಕಾರವೇ ಈ ಸಂಸ್ಥೆಯ ಶಕ್ತಿ” ಎಂದರು.


ನಟಿ ಅನು ಪ್ರಭಾಕರ್ ಮುಖರ್ಜಿ, “ನಾನು ಬಾಲ ನಟಿಯಾಗಿದ್ದಾಗಿನಿಂದಲೂ ಸುಧೀಂದ್ರ ಸರ್ ಅವರನ್ನು ನೋಡಿಕೊಂಡು ಬೆಳೆದವಳು. ಪ್ರಚಾರ ಸಂಸ್ಥೆಯೊಂದು 50 ವರ್ಷಗಳ ಕಾಲ ನಿರಂತರವಾಗಿ ಕೆಲಸ ಮಾಡಿರುವುದು ನಿಜಕ್ಕೂ ಹೆಮ್ಮೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


ಸಂಸ್ಥೆಯ ರುವಾರಿ ಸುಧೀಂದ್ರ ವೆಂಕಟೇಶ್ ಮಾತನಾಡಿ, ಲೋಗೊ ಅನಾವರಣ ಮಾಡಿದ ಗಣ್ಯರಿಗೆ ಧನ್ಯವಾದ ಸಲ್ಲಿಸಿ, “ಏಪ್ರಿಲ್ ತಿಂಗಳಲ್ಲಿ ರಾಘವೇಂದ್ರ ಚಿತ್ರವಾಣಿಯ 50ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. ನಮಗೆ ಸದಾ ಬೆಂಬಲ ನೀಡಿದ ಚಿತ್ರರಂಗ ಮತ್ತು ಮಾಧ್ಯಮರಂಗಕ್ಕೆ ನಾವು ಋಣಿ” ಎಂದರು.


ಸಮಾರಂಭದಲ್ಲಿ ಸುನೀಲ್ ಸುಧೀಂದ್ರ, ಡಿ.ಜಿ. ವಾಸುದೇವ್, ಪವನ್ ವೆಂಕಟೇಶ್ ಸೇರಿದಂತೆ ಸುಧೀಂದ್ರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.