
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಜೂ.22: ಯೋಗದಿಂದ ರೋಗ ಮುಕ್ತ ದೇಶವಾಗಿ ಮಾಡಬಹುದು. ದೈಹಿಕ ಮತ್ತು ಮಾನಸಿಕ ತಲ್ಲಣಗಳ ನಿವಾರಣೆಗೆ ಯೋಗವು ಅವಶ್ಯಕವಾಗಿದೆ ಹೀಗಾಗಿ ಮಕ್ಕಳು ಪ್ರತಿದಿನ ಮನೆಯಲ್ಲಿ ಯೋಗ ಮತ್ತು ಧ್ಯಾನವನ್ನು ಮಾಡಬೇಕೆಂದು ಮುಖ್ಯ ಗುರು ಐ ವೆಂಕಟಲಕ್ಷ್ಮಿ ಹೇಳಿದರು.
ನಗರದ ಚಾಗಿ ನರಸಮ್ಮ ನರಸಯ್ಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಜೂನ್ ಒಂದರಿಂದ ಪ್ರತಿ ದಿನ ಯೋಗಾಸನ ಕಾರ್ಯಕ್ರಮವನ್ನು ಪ್ರಾರಂಭಿಸಿ ಜೂನ್ 21ರಂದು ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯೋಗವು ದೇಹವನ್ನು ಬಲಪಡಿಸುತ್ತದೆ, ಮನಸ್ಸನ್ನು ಶಾಂತಗೊಳಿಸುತ್ತದೆ ಮತ್ತು ದೈನಂದಿನ ಜೀವನದಲ್ಲಿ ಅರಿವು ಮತ್ತು ಜವಾಬ್ದಾರಿಯ ಉನ್ನತ ಪ್ರಜ್ಞೆಯನ್ನು ಬೆಳೆಸುತ್ತದೆ.
ಈ ಸಾವಧಾನತೆಯು ಆರೋಗ್ಯಕರ ಮತ್ತು ಹೆಚ್ಚು ಸುಸ್ಥಿರ ಜೀವನಶೈಲಿಯನ್ನು ಆಯ್ಕೆ ಮಾಡಲು ನಮಗೆ ಅನುವು ಮಾಡಿಕೊಡುತ್ತದೆ ಹಾಗೂ ಯೋಗಾಭ್ಯಾಸದಿಂದಾಗುವ ಹಲವು ಪ್ರಯೋಜನಗಳ ಬಗ್ಗೆ ವಿಶ್ವಾದ್ಯಂತ ಜಾಗೃತಿ ಮೂಡಿಸುವುದು ಅಂತರರಾಷ್ಟ್ರೀಯ ಯೋಗ ದಿನದ ಉದ್ದೇಶವಾಗಿದೆ ಎಂದು ತಿಳಿಸಿದರು.
ಶಿಕ್ಷಕರಾದ ಆಂಜನೇಯ, ದೈಹಿಕ ಶಿಕ್ಷಕ ಕಿರಣ್, ವಾಮದೇವ, ಜಗದೀಶ್ ಸ್ವಾಮಿ, ವೀಣಾದೇವಿ, ಮಂಗಳಮ್ಮ , ಗೀತಾ, ಶ್ರೀದೇವಿ, ವಿಜಯಲಕ್ಷ್ಮಿ , ಹಿಮಾಬಿಂದು ಹಾಗೂ ಮಕ್ಕಳು ಭಾಗವಹಿಸಿದರು.