
ಸನಾ (ಯೆಮೆನ್), ಸೆ.11:- ಯೆಮೆನ್ ಮೇಲೆ ಇಸ್ರೇಲ್ ಮತ್ತೊಂದು ಸುತ್ತಿನ ಭಾರಿ ವೈಮಾನಿಕ ದಾಳಿ ನಡೆಸಿದ ಪರಿಣಾಮ ಕನಿಷ್ಠ 35 ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಹೌತಿ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಹೌತಿ ಬಂಡುಕೋರರು ಇಸ್ರೇಲಿ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಿದ ಕೆಲವೇ ದಿನಗಳ ನಂತರ ಈ ಬೆಳವಣಿಗೆ ನಡೆದಿದೆ. ಮೃತಪಟ್ಟವರಲ್ಲಿ ಹೆಚ್ಚಿನವರು ರಾಜಧಾನಿ ಸನಾದವರಾಗಿದ್ದಾರೆ. ಮಿಲಿಟರಿ ಪ್ರಧಾನ ಕಚೇರಿ ಮತ್ತು ಇಂಧನ ಕೇಂದ್ರವು ಹಾನಿಗೊಳಗಾದ ಸ್ಥಳಗಳಲ್ಲಿ ಸೇರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಏತನ್ಮಧ್ಯೆ, ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್, ಗಾಜಾ ಪಟ್ಟಿಯಲ್ಲಿನ ಯುದ್ಧದ ಬಗ್ಗೆ ಇಸ್ರೇಲ್ ವಿರುದ್ಧ ನಿರ್ಬಂಧಗಳು ಮತ್ತು ಭಾಗಶಃ ವ್ಯಾಪಾರ ಅಮಾನತುಗೊಳಿಸುವಿಕೆಯನ್ನು ಕೋರುವುದಾಗಿ ಹೇಳಿದ್ದಾರೆ. ಮಂಗಳವಾರ ಅಮೆರಿಕ ಆಪ್ತ ಸ್ನೇಹಿತನಾಗಿರುವ ಇಸ್ರೇಲ್, ಕತಾರ್ ನಲ್ಲಿ ಹಮಾಸ್ ನಾಯಕರನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯ ಪರಿಣಾಮವನ್ನು ಈಗಾಗಲೇ ಎದುರಿಸುತ್ತಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಹೌತಿ ನಿಯಂತ್ರಿತ ಉಪಗ್ರಹ ಸುದ್ದಿ ವಾಹಿನಿ ಅಲ್-ಮಸಿರಾಹ್, ಯೆಮೆನ್ ಮೇಲಿನ ದಾಳಿಗಳಲ್ಲಿ ಒಂದು ಮಧ್ಯ ಸನಾದಲ್ಲಿರುವ ಮಿಲಿಟರಿ ಪ್ರಧಾನ ಕಚೇರಿ ಕಟ್ಟಡಕ್ಕೆ ಹೊಡೆದಿದೆ ಎಂದು ಹೇಳಿದೆ. ದಾಳಿಯಿಂದಾಗಿ ನೆರೆಹೊರೆಯ ಮನೆಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.
ಯೆಮೆನ್ ನಲ್ಲಿಯೂ ಇಸ್ರೇಲ್ ವೈಮಾನಿಕ ದಾಳಿ
ಹೌತಿಗಳು ಇಸ್ರೇಲ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಇಸ್ರೇಲ್ ಈ ಹಿಂದೆ ವೈಮಾನಿಕ ದಾಳಿಗಳನ್ನು ಆರಂಭಿಸಿದೆ. ಇರಾನ್ ಬೆಂಬಲಿತ ಹೌತಿಗಳು, ಗಾಜಾ ಪಟ್ಟಿಯಲ್ಲಿ ಹಮಾಸ್ ಮತ್ತು ಪ್ಯಾಲೆಸ್ತೀನಿಯರನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಗಾಜಾ ನಗರವನ್ನು ಸ್ಥಳಾಂತರಿಸುವಂತೆ 1 ದಶಲಕ್ಷ ಜನರಿಗೆ ಇಸ್ರೇಲ್ ಮತ್ತೊಮ್ಮೆ ಕರೆ ನೀಡಿದ್ದು, ಪ್ಯಾಲೇಸ್ತೀನಿಯನ್ ನಗರವನ್ನು ವಶಪಡಿಸಿಕೊಳ್ಳುವ ಗುರಿ ಹೊಂದಿದೆ. ಇದಲ್ಲದೆ, ಹಮಾಸ್ ನ ಕೊನೆಯ ಉಳಿದಿರುವ ಭದ್ರಕೋಟೆ ಎಂದು ಕರೆಯಲ್ಪಡುವ ತನ್ನ ಕಾರ್ಯಾಚರಣೆಯ ಮುಂದಿನ ಹಂತಗಳಿಗೆ ಸಿದ್ಧವಾಗುತ್ತಿರುವುದರಿಂದ ಗಾಜಾ ನಗರದ ಬಳಿ ಉದ್ದೇಶಿತ ದಾಳಿಗಳ ವೇಗವನ್ನು ಶೀಘ್ರದಲ್ಲೇ ಹೆಚ್ಚಿಸುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ.
ಫೆಲೆಸ್ತೀನಿಯರಿಗೆ ದಕ್ಷಿಣಕ್ಕೆ ಗೊತ್ತುಪಡಿಸಿದ ಸುರಕ್ಷಿತ ವಲಯಕ್ಕೆ ಹೋಗಲು ಆದೇಶಿಸಲಾಗಿದೆ. ಅಲ್ಲಿ ಲಕ್ಷಾಂತರ ಜನರು ಈಗಾಗಲೇ ಅಗತ್ಯ ಮೂಲಸೌರ್ಯಗಳಿಲ್ಲದ ಟೆಂಟ್ ಕ್ಯಾಂಪ್ ಗಳಲ್ಲಿ ವಾಸಿಸುತ್ತಿದ್ದಾರೆ. ಇಸ್ರೇಲ್ ನಿಯಮಿತವಾಗಿ ಉಗ್ರಗಾಮಿ ಸಂಘಟನೆಗಳ ಮೇಲೆ ದಾಳಿ ನಡೆಸಲು ಯೋಜಿಸಿದೆ.