
ಉಡುಪಿ: ಕೇಂದ್ರ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಉದ್ಯೋಗ ಆಧಾರಿತ ಕೌಶಲ್ಯ ತರಬೇತಿ ಕಾರ್ಯಕ್ರಮ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯಡಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕ್ರಾಸ್ ಲ್ಯಾಂಡ್ ಕಾಲೇಜಿನ ೩೫ ವಿದ್ಯಾರ್ಥಿಗಳು ತರಬೇತಿಗೆ ಆಯ್ಕೆಯಾಗಿದ್ದು, ಈ ತರಬೇತಿ ಶಿಬಿರವನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಉದ್ಘಾಟಿಸಿದರು. ಅವರು ವಿದ್ಯಾರ್ಥಿಗಳಿಗೆ ಉಚಿತ ಕಿಟ್‌ಗಳನ್ನು ಹಸ್ತಾಂತರಿಸಿದರು.ನಂತರ ಮಾತನಾಡಿದ ಅವರು, ಈ ಯೋಜನೆಯು ೧೮ ರಿಂದ ೩೫ ವರ್ಷದೊಳಗಿನ ಗ್ರಾಮೀಣ ಬಡ ಯುವಕರಿಗೆ ಉಚಿತ ತರಬೇತಿ ಮತ್ತು ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಅವರಿಗೆ ೩ ತಿಂಗಳ ಉಚಿತ ತರಬೇತಿಯ ಜೊತೆಗೆ ಮಾಸಿಕವಾಗಿ ೩೫೦೦ ರು. ತರಬೇತಿ ವೇತನ ನೀಡಲಾಗುತ್ತದೆ, ತರಬೇತಿ ನಂತರ ಉದ್ಯೋಗ ದೊರೆಯುವವರೆಗೆ ಮಾಸಿಕ ೧೨೦೦ ರು. ನಂತೆ ೬ ತಿಂಗಳಿಗೆಗೆ ೭೨೦೦ ರು. ಗಳನ್ನು ಅವರ ಖಾತೆಗೆ ಪಾವತಿಸಲಾಗುತ್ತದೆ. ಜಿಲ್ಲೆಯ ಯುವಜನತೆ ಈ ಯೋಜನೆಯ ಸದುಪಯೋಗ ಪಡೆದು ಸ್ವಯಂ ಉದ್ಯೋಗ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ದೇಶದ ಅಭಿವೃದ್ಧಿಯಲ್ಲಿ ಕೌಶಲ್ಯಾಧಾರಿತ ತರಬೇತಿ ಮತ್ತು ಉದ್ಯೋಗ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದ್ದು, ಕೇಂದ್ರದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಸದುಪಯೋಗ ಪಡೆದುಕೊಳ್ಳಿ ಎಂದು ಕರೆ ನೀಡಿದರು. ಜಿಪಂ ಯೋಜನಾ ನಿರ್ದೇಶಕವಿಜಯ್ ಕುಮಾರ್ ಪ್ರಾಸ್ತಾವಿಕ ಮಾತುಗಳಲ್ಲಿ ಯೋಜನೆಯ ಮಾಹಿತಿ ನೀಡಿದರು. ಕ್ರಾಸ್‌ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲ ಡಾ. ರಾಬರ್ಟ್ ಕ್ಲೈವ್, ತರಬೇತಿಯ ಮುಖ್ಯಸ್ಥ ಗಣೇಶ್ ಪೂಜಾರಿ ಹಾಜರಿದ್ದರು. ಕಾರ್ಯಕ್ರಮವನ್ನು ದೀಪಾ ಅನಂತರಾವ್ ಕಿತ್ತೂರು ಅವರು ನಿರೂಪಿಸಿದರು.























