
ಚೆನ್ನೈ ಸೆ.೧-ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಇತ್ತೀಚಿಗೆ ಐಪಿಎಲ್‌ಗೂ ನಿವೃತ್ತಿ ಘೋಷಿಸಿದ್ದಾರೆ. ಇವರು ಬಾರ್ಡರ್ ಗವಾಸ್ಕರ್ ಸರಣಿಯ ವೇಳೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ವಿದಾಯ ತಿಳಿಸಿದ್ದಾರೆ. ಹೀಗಾಗಿ ಇವರು ಇನ್ನು ವಿದೇಶಿ ಲೀಗ್‌ಗಳಲ್ಲೂ ಭಾಗವಹಿಸಲಿದ್ದಾರೆ.
ಐಪಿಎಲ್‌ನಲ್ಲಿ ನಿವೃತ್ತಿ ಘೋಷಿಸುತ್ತಿದ್ದಂತೆ, ಅಶ್ವಿನ್ ವಿದೇಶಿ ಲೀಗ್‌ಗಳಲ್ಲಿ ಆಡಲು ಯೋಜಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಕಳೆದ ಬಾರಿ ಸೌದಿಯಲ್ಲಿ ನಡೆದಿದ್ದ ಐಪಿಎಲ್ ಹರಾಜಿನಲ್ಲಿ ಅಶ್ವಿನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಖರೀದಿಸಿತ್ತು. ಆದರೆ ಇವರಿಗೆ ಎಲ್ಲ ಪಂದ್ಯಗಳಲ್ಲಿ ಆಡುವ ಅವಕಾಶ ನೀಡಿರಲಿಲ್ಲ. ಅಲ್ಲದೆ ಇವರು ಫ್ರಾಂಚೈಸಿ ನಿಲುವಿನ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಪಷ್ಟ ಪಡಿಸಿದ್ದರು.
ಇದಾದ ಕೆಲವೇ ದಿನಗಳಲ್ಲಿ ಇವರು ಐಪಿಎಲ್‌ಗೂ ನಿವೃತ್ತಿ ಘೋಷಿಸಿದ್ದರು. ಇವರು ಈಗ ಯುಎಇನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಟಿ೨೦ ಲೀಗ್‌ನಲ್ಲಿ ಆಡುವ ಸಾಧ್ಯತೆ ಇದೆ.
ಯುಎಇ ಅಂತರರಾಷ್ಟ್ರೀಯ ಟಿ ೨೦ ಲೀಗ್‌ನ ಮುಂದಿನ ಸೀಸನ್ ಡಿಸೆಂಬರ್ ೨ ರಿಂದ ಜನವರಿ ೪ ರವರೆಗೆ ನಡೆಯಲಿದ್ದು, ಈ ಟೂರ್ನಿಗೆ ಆಟಗಾರರ ಹರಾಜು ಸೆಪ್ಟಂಬರ್ ೩೦ ರಂದು ನಡೆಯಲಿದೆ ಎಂದು ಕ್ರಿಕ್‌ಬಜ್ ವರದಿ ಮಾಡಿದೆ.
ಅಶ್ವಿನ್ ಈ ಟಿ ೨೦ ಲೀಗ್‌ನಲ್ಲಿ ಆಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹರಾಜಿಗೆ ಅಶ್ವಿನ್ ತಮ್ಮ ಹೆಸರನ್ನು ನಮೂದಿಸಿಕೊಳ್ಳಬಹುದಾಗಿದೆ. ಆರಂಭದಲ್ಲಿ ಡ್ರಾಫ್ಟ್ ಮೂಲಕ ಆಟಗಾರರನ್ನು ತಂಡಗಳಿಗೆ ಸೇರಿಸಲಾಗಿತ್ತು. ಆದರೆ ಈ ಸೀಸನ್‌ನಿಂದ ಹರಾಜು ನಡೆಸಲು ತೀರ್ಮಾನಿಸಲಾಗಿದೆ.