
ಶಿವಮೊಗ್ಗ, ನ.೨೦: ಚಾಲಕನ ನಿಯಂತ್ರಣ ಕಳೆದುಕೊಂಡ ಪ್ರವಾಸಿ ಮಿನಿ ಬಸ್ ವೊಂದು ಪಲ್ಟಿಯಾಗಿ ಬಿದ್ದ ಪರಿಣಾಮ, ೨೨ ಜನರು ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ಕೆಳಗಿನ ಕುಂಚೇನಹಳ್ಳಿ ಗ್ರಾಮದ ಶಿವಮೊಗ್ಗ ಶಿಕಾರಿಪುರ ರಸ್ತೆಯಲ್ಲಿ ಸಂಭವಿಸಿದೆ.
ಗಾಯಾಳುಗಳೆಲ್ಲರೂ ತರೀಕೆರೆ ನಿವಾಸಿಗಳಾಗಿದ್ದಾರೆ. ಗಾಯಗೊಂಡವರಲ್ಲಿ ಮಹಿಳೆ, ಮಕ್ಕಳು ಸೇರಿದ್ದಾರೆ. ಕೆಲವರಿಗೆ ಗಂಭೀರ ಸ್ವರೂಪದ ಪೆಟ್ಟು ಬಿದ್ದಿದೆ. ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ನಗರದ ಕೆಲ ಖಾಸಗಿ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಧಾರ್ಮಿಕ ಕ್ಷೇತ್ರ ಮೈಲಾರಲಿಂಗ ಸ್ವಾಮಿ ದೇವಾಲಯಕ್ಕೆ ತೆರಳಿದ್ದ ಸಂಬಂಧಿಗಳ ತಂಡವು, ಅಲ್ಲಿಂದ ಹಿಂದಿರುಗುವಾಗ ಅವಘಡ ಸಂಭವಿಸಿದೆ. ರಸ್ತೆಯಲ್ಲಿ ಹಸು ಅಡ್ಡ ಬಂದಿದ್ದು, ಇದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ವೇಳೆ, ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ಪಲ್ಟಿಯಾಗಿ ಬಿದ್ದಿದೆ.
ಸ್ಥಳೀಯ ಗ್ರಾಮಸ್ಥರು ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಸಂಜೀವ್ ಕುಮಾರ್, ಇನ್ಸ್’ಪೆಕ್ಟರ್ ರಾಘವೇಂದ್ರ ಕಾಂಡಿಕೆರವರು ಭೇಟಿಯಿತ್ತು ಪರಿಶೀಲನೆ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































