ಮಾಂಗಲ್ಯ ಧಾರವಾಹಿಗೆ ಪ್ರೇಕ್ಷಕರ ಮೆಚ್ಚುಗೆ

ಇತ್ತೀಚೆಗಷ್ಟೇ ಪ್ರಾರಂಭವಾದ ಉದಯ ವಾಹಿನಿಯ ‘ಮಾಂಗಲ್ಯ’ಧಾರವಾಹಿಯು ವೀಕ್ಷಕರಿಂದ ಮೆಚ್ಚುಗೆ ಪಡೆದು ಪ್ರಶಂಸೆಯ ಸುರಿಮಳೆ ಬರುತ್ತಿದೆ. ಹೆಸರಾಂತ ನಟಿ ಸುಧಾರಾಣಿ ಮನಸ್ಸಿಗೆ ನಾಟುವಂತೆ ನಿರೂಪಣೆ ಮಾಡಿರುವುದು ವಿಶೇಷ ಅನಿಸಿದೆ. ಸನ್ನಿವೇಶಗಳಲ್ಲಿ ಬರುವ ಸಂಭಾಷಣೆ, ಶ್ರೀಮಂತ ದೃಶ್ಯಗಳು, ಅದಕ್ಕೆ ತಕ್ಕಂತೆ ಕಲಾವಿದರ ನಟನೆ ನೈಜತೆಗೆ ಹತ್ತಿರವಾಗಿದೆ. ಇದರಿಂದ ದಿನದಿಂದ ದಿನಕ್ಕೆ ವೀಕ್ಷಕರಿಗೆ ಸೀರಿಯಲ್ ನೋಡುವ ಕುತೂಹಲ ಹೆಚ್ಚಾಗುತ್ತಿದೆ.

ಇನ್ನು ಕತೆಯ ಕುರಿತು ಹೇಳುವುದಾದರೆ, ದುರ್ಗಾಪುರದ ಬಡತನದಲ್ಲಿ ಬೆಳೆದ ಮಯೂರಿ, ಮನೆ ಮಗನಂತೆ ಶ್ರೀಮಂತ ಕುಟುಂಬದಲ್ಲಿ ಎಲ್ಲಾ ಜವಬ್ದಾರಿ ನಿಭಾಯಿಸುವಂತ ದಿಟ್ಟ ಹುಡುಗಿ. ಆ ಶ್ರೀಮಂತ ಮನೆಯ ಕುಲಪುತ್ರ ತಾರಾಕ್. ಅಮ್ಮನ ಅಹಂಕಾರದ ವರ್ತನೆಗಳು ಅವನಿಗೆ ಹಿಡಿಸುತ್ತಿರುವುದಿಲ್ಲ. ಕಾರಣಾಂತದಿಂದ ಮದ್ಯವ್ಯಸನಿಯಾಗಿರುತ್ತಾನೆ. ಒಳ್ಳೆ ಮನಸ್ಸಿನ ಕುಡುಕ ಒಂದು ಸಂದರ್ಭದಲ್ಲಿ ಅಮ್ಮನ ಅಹಂಕಾರವನ್ನು ಮುರಿಯಲು ಮಯೂರಿಗೆ ತಾಳಿ ಕಟ್ಟುತ್ತಾನೆ. ಅಲ್ಲಿಂದ ಆಕೆಯ ಜೀವನದ ಹೊಸ ಪಯಣ ಶುರುವಾಗುತ್ತದೆ.

ಕರ್ನಾಟಕದಾದ್ಯಂತ ಹೆಸರು ಮಾಡಿರುವ ಬಿಗ್‌ಬಾಸ್‌ನ ಜಗನ್ ನಾಯಕನ ಪಾತ್ರವನ್ನು ನಿಭಾಯಿಸುವುದಲ್ಲದೆ, ನಿರ್ಮಾಣ ಮಾಡಿ, ನಿರ್ದೇಶನದಲ್ಲೂ ಸೈ ಅನಿಸಿಕೊಂಡಿದ್ದಾರೆ. ಗಂಡನನ್ನು ಸರಿದಾರಿಗೆ ತರುವ ಪಾತ್ರದಲ್ಲಿ ನಾಯಕಿ ಐಶ್ವರ್ಯ ಪಿಸ್ಸೆ ದಿಟ್ಟತನದ ಅಭಿನಯ, ಇಂದಿನ ಮಹಿಳೆಯರಿಗೆ ಧೈರ್ಯ ತುಂಬಲು ಸಹಕಾರಿಯಾಗಿದೆ. ಇವರೊಂದಿಗೆ ಜಾನ್ಸಿ, ಬಿ.ಎಂ.ವೆಂಕಟೇಶ್, ಇಂಚರ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್, ದಾಮಿನಿ ಮುಂತಾದವರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ನವೀನ್ ಸೋಮನಹಳ್ಳಿ ಸಂಚಿಕೆ ನಿರ್ದೇಶನವಿದೆ. ಛಾಯಾಗ್ರಹಣ ಮಂಜು, ಸಂಕಲನ ಧನು ಅವರದಾಗಿದೆ. ಧಾರವಾಹಿಯು ಪ್ರತಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7 ಗಂಟೆಗೆ ಉದಯ ಟಿವಿದಲ್ಲಿ ಪ್ರಸಾರವಾಗುತ್ತಿದೆ.