ಮಲೆ ಮಹದೇಶ್ವರನ ಈಗ ಕೋಟ್ಯಾದೀಶ್ವರ

ಚಾಮರಾಜನಗರ,ಜೂ19: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಎಣಿಕೆ ಕಾರ್ಯ ನಡೆಯಿತು. ಹುಂಡಿಯಲ್ಲಿ ವಿದೇಶಗಳ 15 ನೋಟುಗಳು ಹಾಗೂ ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ ನೋಟುಗಳು ಕಂಡುಬಂದಿದ್ದು ಜಿಲ್ಲೆಯ ಹನೂರು ತಾಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆದ ಹುಂಡಿ ಹಣ ಎಣಿಕೆಯಲ್ಲಿ ಈ ಬಾರಿ 34 ದಿನಗಳ ಅವಧಿಯಲ್ಲಿ 2.65 ಕೋಟಿ ರೂ. ಸಂಗ್ರಹವಾಗಿದೆ.
ಮಲೆ ಮಹದೇಶ್ವರ ಬೆಟ್ಟದ ಬಸ್ ನಿಲ್ದಾಣದ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರ ಸಮ್ಮುಖದಲ್ಲಿ ಬುಧವಾರ ಹುಂಡಿಗಳನ್ನು ತೆರೆಯಲಾಯಿತು. ಬಳಿಕ ಸಿಸಿ ಕ್ಯಾಮರಾ ಕಣ್ಣಾವಲಿನಲ್ಲಿ ಎಣಿಕೆ ಕಾರ್ಯ ಪ್ರಾರಂಭಗೊಂಡು ಸಂಜೆ 7 ಗಂಟೆಗೆ ಮುಕ್ತಾಯವಾಯಿತು.


ಮಲೆ ಮಹದೇಶ್ವರ ದೇಗುಲದ ಹುಂಡಿ ಎಣಿಕೆ
ಸರ್ಕಾರಿ ರಜಾ ದಿನ, ಅಮಾವಾಸ್ಯೆ ಜಾತ್ರಾ ಮಹೋತ್ಸವ ಸೇರಿದಂತೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಉಚಿತ ಪ್ರಯಾಣದ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಬಾರಿ 34 ದಿನಗಳ ಅವಧಿಯಲ್ಲಿ 2,65,04,712 ನಗದು ಹಣ, 58 ಗ್ರಾಂ ಚಿನ್ನ ಹಾಗೂ 2.7 ಕೆಜಿ ಬೆಳ್ಳಿಯ ವಸ್ತುಗಳನ್ನು ಹುಂಡಿಗೆ ಕಾಣಿಕೆ ಸಲ್ಲಿಸಿದ್ದಾರೆ.
ಇದಲ್ಲದೆ, ಇ-ಹುಂಡಿಯಿಂದ 6,66,104 ರೂ. ಹಾಗೂ ವಿದೇಶಗಳ 15 ನೋಟುಗಳು, ಚಲಾವಣೆಯಲ್ಲಿ ಇಲ್ಲದ 2000 ಮುಖಬೆಲೆಯ 36 ನೋಟುಗಳನ್ನು ಹುಂಡಿಯಲ್ಲಿ ಹಾಕಿದ್ದಾರೆ ಎಂದು ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ಮಾಹಿತಿ ನೀಡಿದ್ದಾರೆ.