
ನ್ಯೂಯಾರ್ಕ್, ಡಿ. ೧೦- ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ನಿಲ್ಲಿಸಿದ್ದಾಗಿ ೭೦ನೇ ಬಾರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ಈ ಹೇಳಿಕೆಯನ್ನು ಭಾರತ ತಳ್ಳಿ ಹಾಕಿದ್ದರೂ ಟ್ರಂಪ್ ಮಾತ್ರ ಪುಂಖಾನುಪುಂಖವಾಗಿ ಭಾರತ- ಪಾಕ್ ಯುದ್ಧ ನಿಲ್ಲಿಸಿದ್ದ ಬಗ್ಗೆ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರೆ.
ಪಿನ್ಸಿಲ್ವೇನಿಯಾ ನಡೆದ ಆರ್ಥಿಕತೆ ಕುರಿತ ಸಮಾವೇಶದಲ್ಲಿ ಮಾತನಾಡಿದ ಅವರು ಕಳೆದ ೧೦ ತಿಂಗಳ ಅವಧಿಯಲ್ಲಿ ೮ ಯುದ್ಧಗಳನ್ನು ಅಂತ್ಯಗೊಳಿಸಿದ್ದೇನೆ ಎಂದರು.
ಕೊಸೊವೊ ಮತ್ತು ಸರ್ಬಿಯಾ, ಭಾರತ ಮತ್ತು ಪಾಕಿಸ್ತಾನ, ಇಸ್ರೇಲ್- ಇರಾನ್, ಈಜಿಪ್ಟ್ – ಇಥಿಯೊಫೀಯಾ, ಅರ್ಮೇನಿಯಾ -ಅಜರ್ ಬೈಜಾನ್ ನಡುವಿನ ಯುದ್ಧಗಳನ್ನು ನಿಲ್ಲಿಸಿರುವುದಾಗಿ ಹೇಳಿದ್ದಾರೆ.
ಪರಮಾಣು ಅಸ್ತ್ರ ಹೊಂದಿರುವ ಭಾರತ ಹಾಗೂ ಪಾಕಿಸ್ತಾನ ಯುದ್ಧ ಮುಂದುವರಿಸಲು ಬಯಸಿದ್ದವು. ಆದರೆ ತಾವು ಈ ಯುದ್ಧವನ್ನು ಅಂತ್ಯಗೊಳಿಸಿದ್ದಾಗಿ ಹೇಳಿದ್ದಾರೆ.
ಪಾಕಿಸ್ತಾನ ವಿಚಾರ ಕುರಿತಂತೆ ೩ನೇ ದೇಶ ಮೂಗು ತೂರಿಸುವುದನ್ನು ಭಾರತ ಸ್ಪಷ್ಟವಾಗಿ ತಳ್ಳಿಹಾಕುತ್ತಲೇ ಬಂದಿದೆ. ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ೨೬ ಮಂದಿ ಅಮಾಯಕರ ಬಲಿ ತೆಗೆದುಕೊಂಡಿದ್ದ ಉಗ್ರಗಾಮಿಗಳ ವಿಧ್ವಂಸಕ ಕೃತ್ಯಕ್ಕೆ ಪ್ರತಿಕಾರವಾಗಿ ಭಾರತ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ ಹೆಸರಿನಲ್ಲಿ ಸೇನಾ ಪಡೆ ದಾಳಿ ನಡೆಸಿತ್ತು. ಈ ಕಾರ್ಯಾಚರಣೆ ಉಗ್ರ ಅಜರ್ ಅವರ ೧೦ ಮಂದಿ ಕುಟುಂಬ ಸದಸ್ಯರು ಸಾವನ್ನಪ್ಪಿದ್ದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಬಿರುಸುಗೊಂಡ ಬೆನ್ನಲ್ಲೇ ಭಾರತ ಮತ್ತು ಪಾಕ್ ನಡುವಣ ಸಂಘರ್ಷ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಂಘರ್ಷ ಅಂತ್ಯಗೊಳಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಂದಿನಿಂದ ಇದುವರೆಗೆ ಟ್ರಂಪ್ ಭಾರತ ಮತ್ತು ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಹೇಳುತ್ತಲೆ ಬಂದಿದ್ದಾರೆ. ಆದರೆ ಕಳೆದ ೩ ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವಣ ಯುದ್ಧ ಅಂತ್ಯಗೊಳಿಸಲು ಟ್ರಂಪ್ ತೀವ್ರ ಕಸರತ್ತು ನಡೆಸಿದರೂ ಎರಡು ದೇಶಗಳ ನಡುವಣ ಯುದ್ಧವನ್ನು ನಿಲ್ಲಿಸಲು ಟ್ರಂಪ್‌ಗೆ ಇನ್ನು ಸಾಧ್ಯವಾಗಿಲ್ಲ.

























