
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಜ. 30 :- ಜಾನುವಾರುಗಳಿಗೆ ಸಂಗ್ರಹಿಸಲಿಟ್ಟ ಮೆಕ್ಕೆಜೋಳ ಬಣವೆಗೆ ಆಕಸ್ಮಿಕ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ರಂಗನಾಥನಹಳ್ಳಿ ಗ್ರಾಮದಲ್ಲಿ ಇಂದು ನಸುಕಿನ ಜಾವ ಜರುಗಿದೆ.
ತಾಲೂಕಿನ ಹೊಸಹಳ್ಳಿ ಹೋಬಳಿಯ ರಂಗನಾಥನಹಳ್ಳಿಯ ಚಿನ್ನಾಪುರದಪ್ಪರ ರಾಜಪ್ಪ ಹಾಗೂ ಭರತ್ ಎಂಬುವವರಿಗೆ ಸೇರಿದ ಮೆಕ್ಕೆಜೋಳ ಬಣವೆ ಎಂದು ತಿಳಿದಿದ್ದು ಸುಮಾರು 6 ಲೋಡಿನಷ್ಟು ಮೆಕ್ಕೆಜೋಳ ಸೊಪ್ಪೆಯನ್ನು ಜಾನುವಾರುಗಳಿಗೆ ಸಂಗ್ರಹಿಸಿಡಲಾಗಿತ್ತು ಇಂದು ನಸುಕಿನ ಜಾವ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಬೆಂಕಿಯ ಕೆನ್ನಾಲಿಗೆಗೆ ಬಣವೆ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಸುಮಾರು 50ಸಾವಿರ ರೂ ನಷ್ಟು ನಷ್ಟವಾಗಿದೆ ಎಂದು ತಿಳಿದಿದೆ.
ಸುದ್ದಿ ತಿಳಿದ ಕೂಡ್ಲಿಗಿ ಅಗ್ನಿಶಾಮಕದಳ ಘಟನಾ ಸ್ಥಳಕ್ಕೆ ಧಾವಿಸಿದ್ದರಿಂದ ಅಲ್ಲೇ ಅಕ್ಕ ಪಕ್ಕದಲ್ಲಿದ್ದ ಮನೆಗಳು ಬೆಂಕಿ ಅನಾಹುತದಿಂದ ತಪ್ಪಿಸಿದಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದು ಅಗ್ನಿಶಾಮಕದಳದ ಠಾಣಾಧಿಕಾರಿ ಶರಣಬಸವರೆಡ್ಡಿ, ಚಾಲಕ ಹರಿಕೃಷ್ಣ ಹಾಗೂ ಅಗ್ನಿಶಾಮಕರಾದ ರವಿಕುಮಾರ್, ಶಿವಶಂಕರ ಮತ್ತು ರಮೇಶ ನಾವಿ ಇವರುಗಳು ಬೆಂಕಿ ಆರಿಸಿ ಹೆಚ್ಚಿನ ಅನಾಹುತ ತಪ್ಪಿಸುವಲ್ಲಿ ಸ್ಥಳೀಯರೊಂದಿಗೆ ಯಶಸ್ವಿಯಾಗಿದ್ದಾರೆ.
























