ಬಹುಮುಖ ಪ್ರತಿಭೆಗೆ ರಾಷ್ಟ್ರ, ರಾಜ್ಯ ಪ್ರಶಸ್ತಿ ಗರಿ

2023ರ ’ಕಂದೀಲು’ ಚಿತ್ರಕ್ಕೆ 71ನೇ ರಾಷ್ಟ್ರ ಪ್ರಶಸ್ತಿಗೆ ಮೊನ್ನೆಯಷ್ಟೇ ಆಯ್ಕೆಯಾಗಿದೆ. ಚಿತ್ರರಂಗದಲ್ಲಿ ಕೆಲವು ಹಿರಿಯ ಪ್ರತಿಭೆಗಳು ಸಾಧನೆ ಮಾಡಿದ್ದರೂ, ಎಲೆಮೆರೆ ಕಾಯಿಯಂತೆ ಇರುತ್ತಾರೆ. ಆ ಸಾಲಿಗೆ ತುಮಕೂರು ಜಿಲ್ಲೆ, ತಿರುಮಲಪಾಳ್ಯದ ಗ್ರಾಮೀಣ ಪ್ರತಿಭೆ ನಾಗೇಶ್.ಎನ್ ಸೇರ್ಪಡೆಯಾಗುತ್ತಾರೆ.

ಬಾಲ್ಯದಿಂದಲೇ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಚಿತ್ರಗಳನ್ನು ನೋಡುತ್ತಾ, ತಾನು ಮುಂದೊಂದು ದಿನ ಚಿತ್ರರಂಗಕ್ಕೆ ಬರಬೇಕೆಂಬ ಸಣ್ಣದೊಂದು ಆಸೆ ಚಿಗುರಿದೆ. ಡಿಗ್ರಿ ಬಳಿಕ ಅಶೋಕ್ ಪೈ ಮಾರ್ಗದರ್ಶನದಲ್ಲಿ ಎಮ್.ಎಸ್.ಸಿ ಇನ್ ಕೌನ್ಸಿಲಿಂಗ್ ಅಂಡ್ ಸೈಕೋಥೆರಪಿ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸುತ್ತಾರೆ.

  ಇದೆಲ್ಲಾದರ ಪರಿಣಾಮ 2000 ಇಸವಿಯಲ್ಲಿ ಕಾಶಿನಾಥ್ ಆರ್ಶಿವಾದದೊಂದಿಗೆ,  ಆರ್.ಎನ್.ಜಯಗೋಪಾಲ್, ಪಿ.ಹೆಚ್.ವಿಶ್ವನಾಥ್, ಗಿರೀಶ್‌ಕಾಸರವಳ್ಳಿ, ಪ್ರೇಮಾಕಾರಂತ್, ಸುಚೇಂದ್ರಪ್ರಸಾದ್ ಬಳಿ ಕೆಲಸ ಮಾಡುವ ಅವಕಾಶ ಒದಗಿಬಂದಿದೆ. ನಿರ್ದೇಶಕನಾದವನಿಗೆ ಬರವಣಿಗೆ ಜತೆಗೆ ಸಂಕಲನ ಕಾರ್ಯ ಮುಖ್ಯವೆಂದು ಅರಿತುಕೊಂಡರು. 2003 ರಿಂದಲೇ ಅದನ್ನು ಕಲಿತು ನೂರಾರು ಸಾಕ್ಷ್ಯಚಿತ್ರಗಳು, ಜಾಹಿರಾತು, ಧಾರವಾಹಿಗಳು ಇದೆಲ್ಲಾವನ್ನು ಮಾಡುತ್ತಾ ಬಂದಿದ್ದಾರೆ. ಅಲ್ಲದೆ ದೂರದರ್ಶನದಲ್ಲಿ ಒಂಬತ್ತು ವರ್ಷ ಎಡಿಟರ್ ಆಗಿ ಸೇವೆ ಸಲ್ಲಿಸಿದ್ದಾರೆ.

   2010ರಲ್ಲಿ ’ಕೋತಿರಾಜ್’ ಸಿನಿಮಾಕ್ಕೆ ರಚನೆ,ಚಿತ್ರಕಥೆ,ಸಂಭಾಷಣೆ ಹಾಗೂ ಸಹಾಯಕ ನಿರ್ದೇಶನದಲ್ಲಿ ಸೈ ಅನಿಸಿಕೊಂಡರು. ಅಲ್ಲಿಂದ ತಿರುಗಿನೋಡದೆ ರಾಘವೇಂದ್ರ ರಾಜ್‌ಕುಮಾರ್ ನಟನೆಯ ’ರಾಜತಂತ್ರ’ ಸೇರಿದಂತೆ ಸುಮಾರು 24 ಸಿನಿಮಾಗಳಿಗೆ ಸಂಕಲನಕಾರನಾಗಿ ಗುರುತಿಸಿಕೊಂಡು ಇಂದಿಗೂ ಚಾಲ್ತಿಯಲ್ಲಿ ಇರುತ್ತಾರೆ.

 2019ರಲ್ಲಿ ’ಗೋಪಾಲಗಾಂಧಿ’ ಸಿನಿಮಾಕ್ಕೆ ಚಿತ್ರಕಥೆ,ಸಂಭಾಷಣೆ ಬರೆದು ಮೊದಲ ಬಾರಿ ನಿರ್ದೇಶನ ಮಾಡಿದ್ದರು. ಈ ಸಿನಿಮಾಕ್ಕೆ ಪ್ರಥಮ ಅತ್ಯುತ್ತಮ ಚಿತ್ರವೆಂದು ರಾಜ್ಯ ಪ್ರಶಸ್ತಿ ಲಭಿಸಿತು. ’ಬೈಲ್ ಕೋಲ್’ ಬ್ಯಾರಿ ಭಾಷೆಯ ಸಿನಿಮಾವು ಕೊಲ್ಕತ್ತಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಮನ್ನಣೆ ಗಳಿಸಿತು. 

2023ರ ’ಕಂದೀಲು’ ಚಿತ್ರಕ್ಕೆ 71ನೇ ರಾಷ್ಟ್ರ ಪ್ರಶಸ್ತಿಗೆ ಮೊನ್ನೆಯಷ್ಟೇ ಆಯ್ಕೆಯಾಗಿದೆ. ಸದರಿ ಸಿನಿಮಾಕ್ಕೆ ಇವರದೇ ಕಥೆ,ಚಿತ್ರಕಥೆ,ಸಂಭಾಷಣೆ ಮತ್ತು ಸಂಕಲನ ಎಂಬುದು ಹೆಮ್ಮೆಯ ವಿಷಯವಾಗಿದೆ. ನೈಜ ಘಟನೆಯ ’ಬೇಲಿ ಹೂ’ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದು, ಇದಕ್ಕೂ 2024ರ ಬೆಂಗಳೂರು  ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗಳಿಸಿದೆ. ಇವರ ನಿರ್ದೇಶನದ ’ಸಂಸ್ಕಾರ ಭಾರತ’ ಬಿಡುಗಡೆಗೆ ಸಿದ್ದವಾಗಿದೆ. ಇಪ್ಪತ್ತೈದು ವರ್ಷ ಅನುಭವದಲ್ಲಿ, ಮುಂದೆ ಸಮಾಜಮುಖಿಯಾಗಿ ಚಿಂತನೆ ಮಾಡುವ, ಸಮಾಜದ ಹುಳುಕನ್ನು ತಿದ್ದುವ, ಒಳಿತನ್ನೇ ಬಯಸುವ ಕಥೆಗಳನ್ನು ವೈಚಾರಿಕತೆಯಿಂದ ಆಯ್ದುಕೊಂಡು, ಅಂತಹ ಚಿತ್ರಕ್ಕೆ ಡೈರಕ್ಷನ್ ಮಾಡಬೇಕೆಂಬ ಬಯಕೆ ಇದೆ ಎನ್ನುತ್ತಾರೆ ನಾಗೇಶ್.ಎನ್.