ಪುನರ್ಜನ್ಮದ ಸೇಡು, ಸಸ್ಪೆನ್ಸ್‌ನ ‘ಶಿಖಂಡಿ’

‘ಮಾರಕಾಸ್ತ್ರ’ ನಂತರ ನಿರ್ದೇಶಕ ಗುರುಮೂರ್ತಿ ವಿ ಇದೀಗ ವಿಭಿನ್ನ ಕಥಾಹಂದರದೊಂದಿಗೆ ‘ಶಿಖಂಡಿ’ ಎಂಬ ಹೊಸ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಇತ್ತೀಚೆಗೆ ಅನಾವರಣಗೊಂಡ ಮೋಷನ್ ಪೋಸ್ಟರ್ ಚಿತ್ರದ ಮೇಲೆ ಕುತೂಹಲ ಹೆಚ್ಚಿಸಿದ್ದು, ಮೇ ತಿಂಗಳಲ್ಲಿ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದದ್ದಾಗಿದೆ.

ಪೋಲಾ ಪ್ರವೀಣ್ ಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಮಹಾಭಾರತದ ಶಿಖಂಡಿ ಪಾತ್ರವೇ ಸ್ಪೂರ್ತಿ. “ಪುನರ್ಜನ್ಮ ಮತ್ತು ಸೇಡು” ಎಂಬ ಅಂಶವನ್ನು ಆಧಾರವಿಟ್ಟು ಸಸ್ಪೆನ್ಸ್, ಥ್ರಿಲ್ಲರ್, ಹಾರರ್ ಹಾಗೂ ಕಾಮಿಡಿ ಮಿಶ್ರಿತ ಕೌಟುಂಬಿಕ ಕಥಾಹಂದರವನ್ನು ಹೆಣೆಯಲಾಗಿದೆ ಎಂದು ನಿರ್ದೇಶಕ ಗುರುಮೂರ್ತಿ ತಿಳಿಸಿದ್ದಾರೆ. ಕಥೆ ಕೇಳಿದ ತಕ್ಷಣ ನಿರ್ಮಾಪಕರು ಒಪ್ಪಿಕೊಂಡು ಚಿತ್ರಕ್ಕೆ ಬೆಂಬಲ ನೀಡಿದರು ಎಂದೂ ಅವರು ಹೇಳಿದರು.

ಮೊದಲ ನಿರ್ಮಾಣವಾಗಿರುವುದರಿಂದ ವಿಶೇಷ ಕಾಳಜಿ ತೆಗೆದುಕೊಂಡಿದ್ದೇವೆ. ಕಥೆಯ ಮೇಲಿನ ನಂಬಿಕೆ ಮತ್ತು ನಿರ್ದೇಶಕರ ಸಿನಿಮಾ ಪ್ರೀತಿ ಈ ಪ್ರಾಜೆಕ್ಟ್‌ಗೆ ಶಕ್ತಿ ನೀಡಿದೆ ಎಂದು ನಿರ್ಮಾಪಕ ಪ್ರವೀಣ್ ಕುಮಾರ್ ಹೇಳಿದರು.

ನಾಯಕನಾಗಿ ಮೊದಲ ಬಾರಿಗೆ ಅಭಿನಯಿಸುತ್ತಿರುವ ಯುವರಾಜ್ ಗೌಡ, “ಶೀರ್ಷಿಕೆ ಕೇಳಿ ಆಶ್ಚರ್ಯವಾಯಿತು. ಆದರೆ ಕಥೆ ಕೇಳಿದ ಮೇಲೆ ಖುಷಿಯಾಯಿತು. ‘ಸೂರ್ಯ’ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದರು. ನಾಯಕಿ ಖ್ಯಾತಿಗೆ ಇದು ಚೊಚ್ಚಲ ಚಿತ್ರ. ನಟಿ ನಿಖಿತಾ ಸ್ವಾಮಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಬಿಗ್ ಬಾಸ್’ ಖ್ಯಾತಿಯ ನೀತು ಹಾಗೂ ಚಾಂದಿನಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಹಿರಿಯ ಕಲಾವಿದರಾದ ರಘು ರಾಮನಕೊಪ್ಪ, ದೀಪಕ್ ಶೆಟ್ಟಿ, ವಿಜಯ್ ಚಂಡೂರ್ ಮುಂತಾದವರು ತಾರಾಗಣದಲ್ಲಿ ಇದ್ದಾರೆ. ಛಾಯಾಗ್ರಹಣ ಸ್ವಾಮಿ, ಸಂಗೀತ ಮಂಜುಕವಿ, ಸಾಹಿತ್ಯ ಕಿನ್ನಾಳ್ ರಾಜ್, ಹಿನ್ನೆಲೆ ಸಂಗೀತ ಪ್ರದ್ಯೋತನ್, ನೃತ್ಯ ಜಗ್ಗು ಮಾಸ್ಟರ್ ಹಾಗೂ ಚಿತ್ರಕಥೆ ದಯಾಶಂಕರ್ ಅವರದು.

ಮೋಷನ್ ಪೋಸ್ಟರ್ ಮೂಲಕವೇ ಕುತೂಹಲ ಹುಟ್ಟಿಸಿರುವ ‘ಶಿಖಂಡಿ’—ಪುನರ್ಜನ್ಮದ ಸೇಡಿನ ಕಥೆ, ದೊಡ್ಡ ಪರದೆ ಮೇಲೆ ಯಾವ ರೀತಿಯ ಸಂಚಲನ ಸೃಷ್ಟಿಸಲಿದೆ ಎಂಬುದನ್ನು ಕಾದುನೋಡಬೇಕು.