
ಕೊಲಂಬೊ, ಅಕ್ಟೋಬರ್ ೬: ಕಳಪೆ ಫೀಲ್ಡಿಂಗ್ ಹೊರತಾಗಿಯೂ ಆಲ್ ರೌಂಡ್ ಪ್ರದರ್ಶನ ನೀಡಿದ ಭಾರತ ತಂಡ ಮಹಿಳೆಯರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ೮೮ ರನ್ ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಪಾಕಿಸ್ತಾನ ವಿರುದ್ಧದ ಜಯಾಪಜಯ ದಾಖಲೆಯನ್ನು ೧೨-೦ಗೆ ವಿಸ್ತರಿಸಿದೆ.
ಆರ್.ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ೫೦ ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ನಷ್ಟಕ್ಕೆ ೨೪೭ ರನ್ ಕಲೆಹಾಕಿತು. ಇದಕ್ಕೆ ಉತ್ತರವಾಗಿ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ ೪೩ ಓವರ್ ಗಳಲ್ಲಿ ೧೫೯ ರನ್ ಗಳಿಗೆ ಸರ್ವಪತನಗೊಂಡಿತು. ಹೀಗಾಗಿ ಟೂರ್ನಿಯಲ್ಲಿ ಸತತ ಎರಡನೇ ಸೋಲಿಗೆ ಗುರಿಯಾಯಿತು. ಕ್ರಾಂತಿ ಗೌಡ್ ಮತ್ತು ದೀಪ್ತಿ ಶರ್ಮಾ ತಲಾ ಮೂರು ಕಬಳಿಸಿದರೆ, ಸ್ನೇಹ ರಾಣಾ ೨ ವಿಕೆಟ್ ಪಡೆದು ಎದುರಾಳಿ ತಂಡವನ್ನು ಬೇಗನೇ ಆಲೌಟ್ ಮಾಡಿದರು.
ಪಾಕ್ ವನಿತೆಯರಲ್ಲಿ ಸಿದ್ರಾ ಅಮೀನ್ ೮೧ ರನ್ ಗಳಿಸಿದರೆ, ನತಾಲಿಯಾ ಪರ್ವೇಜ್ ೩೩ ರನ್ ಮತ್ತು ಸಿದ್ರಾ ನವಾಜ್ ೧೪ ರನ್ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ಎರಡಂಕಿ ದಾಟಲಿಲ್ಲ.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿದ ಪ್ರತೀಕಾ ರಾವಲ್ (೩೧ ರನ್) ಮತ್ತು ಸ್ಮೃತಿ ಮಂಧಾನ (೨೩ ರನ್) ಬಾರಿಸಿ ೪೮ ರನ್ ಗಳ ಜೊತೆಯಾಟವಾಡಿದರು.
ಬಳಿಕ ಬಂದ ಹರ್ಲೀನ್ ಡಿಯೋಲ್ ೧ ಸಿಕ್ಸರ್, ೨ ಬೌಂಡರಿ ಸೇರಿ ೪೬ ರನ್ ಗಳಿಸಿದರೆ, ನಾಯಕಿ ಹರ್ಮನ್ ಪ್ರೀತ್ ಕೌರ್ ಕೇವಲ ೧೯ ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಜೆಮಿಮಾ ರಾಡ್ರಿಗಸ್ (೩೨ ರನ್), ದೀಪ್ತಿ ಶರ್ಮಾ (೨೫ ರನ್), ಸ್ನೇಹ ರಾಣಾ (೨೦), ರಿಚಾ ಘೋಷ್ ಔಟಾಗದೇ ೩೫ ರನ್ ಗಳಿಸಿದ್ದರಿಂದ ತಂಡ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು.
ನೋ ಹ್ಯಾಂಡ್ಶೇಕ್: ಟಾಸ್ ನಂತರ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ಪಾಕ್ ನಾಯಕಿಯೊಂದಿಗೆ ಹಸ್ತಲಾಘವ ಮಾಡದೇ ಭಾರತದ ’ನೋ ಹ್ಯಾಂಡ್ಶೇಕ್ ನಿಲುವನ್ನು ಮುಂದುವರೆಸಿದರು. ಇದರೊಂದಿಗೆ ಭಾರತೀಯ ಕ್ರಿಕೆಟ್ ತಂಡವು ಪಾಕಿಸ್ತಾನಿ ಆಟಗಾರರೊಂದಿಗೆ ಯಾವುದೇ ಕಾರಣಕ್ಕೂ ಹ್ಯಾಂಡ್ಶೇಕ್ ಮಾಡಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು.
ಸಂಕ್ಷಿಪ್ತ ಸ್ಕೋರ್:
ಭಾರತ: ೨೪೭/೧೦ (೫೦ ಓವರ್).
ಪಾಕಿಸ್ತಾನ: ೧೫೯/೧೦ (೪೩ ಓವರ್).