
ಚಿಕ್ಕಮಗಳೂರು,ಸೆ.೨೧- ಪ್ರಸಿದ್ಧ ಪ್ರವಾಸಿ ತಾಣದ ಕೆಮ್ಮಣ್ಣುಗುಂಡಿಯ ವೀವ್ ಪಾಯಿಂಟ್‌ನಲ್ಲಿ ಪತ್ನಿ ಜೊತೆ ಸೆಲ್ಫಿ ತೆಗೆಯಲು ಹೋದ ಶಿಕ್ಷಕರೊಬ್ಬರು ಪ್ರಪಾತಕ್ಕೆ ಕಾಲು ಜಾರಿ ಬಿದ್ದು ಪತಿ ಮೃತಪಟ್ಟಿರುವ ದಾರುಣ ಘಟನೆ ಕೆಮ್ಮಣ್ಣುಗುಂಡಿಯಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಂತೋಷ್ (೪೦) ಮೃತ ಶಿಕ್ಷಕರಾಗಿದ್ದಾರೆ.
ಶಿಕ್ಷಕ ಸಂತೋಷ್ ಮತ್ತು ಪತ್ನಿ ಶ್ವೇತ ಜಿಲ್ಲೆಯ ಪಶ್ಚಿಮ ಘಟ್ಟಗಳ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ನೋಡಲು ನಿನ್ನೆ ಬಂದಿದ್ದರು. ಕೆಮ್ಮಣ್ಣುಗುಂಡಿ ಪಾರ್ಕ್ ವೀಕ್ಷಣೆ ಮಾಡಿದ ದಂಪತಿ, ಕೆಮ್ಮಣ್ಣುಗುಂಡಿ ವೀವ್ ಪಾಯಿಂಟ್ ಬಳಿ ಹೋಗಿದ್ದಾರೆ.
ಪ್ರಕೃತಿ ಸೌಂದರ್ಯದ ನಡುವೆ ಹೆಂಡತಿಯೊಂದಿಗೆ ಸೆಲ್ಫಿ ತೆಗೆಯಲು ಸಂತೋಷ್ ಮುಂದಾಗಿ ಪ್ರಪಾತದ ತುದಿಯಲ್ಲಿ ನಿಂತಿದ್ದ ಸಂತೋಷ್ ಕಾಲು ಜಾರಿ ನೂರಾರು ಅಡಿ ಆಳಕ್ಕೆ ಬಿದ್ದಾಗ ತಲೆಗೆ ಕಲ್ಲು ಬಂಡೆಗಳು ಬಡಿದು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ.
ಮೃತ ಶಿಕ್ಷಕ ಸಂತೋಷ್ ಅವರು ಶ್ವೇತ ಜೊತೆ ಕಳೆದ ೫ ವರ್ಷಗಳ ಹಿಂದೆ ವಿವಾಹವಾಗಿದ್ದರು. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನಲ್ಲಿರುವ ಲಕ್ಷ್ಮೀಸಾಗರ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ದಸರಾ ರಜೆ ಸಿಕ್ಕ ಹಿನ್ನಲೆ ಕೆಮ್ಮಣ್ಣುಗುಂಡಿಗೆ ಹೆಂಡತಿ ಜೊತೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಭೀಕರ ದುರಂತ ಸಂಭವಿಸಿದೆ. ಸದ್ಯ ಮೃತ ದೇಹವನ್ನು ಹಗ್ಗದ ಮೂಲಕ ನೂರಾರು ಅಡಿಗಳ ಪ್ರಪಾತದಿಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೇಲಕ್ಕೆತ್ತಿದ್ದಾರೆ.
ಮಲೆನಾಡು ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಅಪಾಯಕಾರಿ ಸ್ಥಳಗಳಿಗೆ ತೆರಳದಂತೆ ಪ್ರವಾಸಿಗರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ, ಮಾತು ಕೇಳದ ಶಿಕ್ಷಕ, ಹೆಂಡತಿ ಜೊತೆ ಸೆಲ್ಫಿ ತೆಗೆಯಲು ಹೋಗಿ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಲಿಂಗದಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.