
ನ್ಯಾಯಕ್ಕಾಗಿ ಹೋರಾಡುವ ವಕೀಲರ ಬದುಕಿನ ಹಿಂದೆ ಇರುವ ತ್ಯಾಗ, ಒತ್ತಡ ಮತ್ತು ಅಹೋರಾತ್ರಿ ಹೋರಾಟವನ್ನು ಹೊಗಳುವ ವಿಶಿಷ್ಟ ಸಂಗೀತ ಆಲ್ಬಮ್ ‘ನ್ಯಾಯ–ಅನ್ಯಾಯ’ ಬಿಡುಗಡೆಗೊಂಡಿದೆ. ಭಾರತೀಯ ಸಂಗೀತ ಇತಿಹಾಸದಲ್ಲೇ ವಕೀಲರ ವೃತ್ತಿಗೆ ಸಂಪೂರ್ಣವಾಗಿ ಅರ್ಪಿತವಾದ ಮೊದಲ ಪ್ರಯತ್ನ ಎನ್ನುವ ಹೆಗ್ಗಳಿಕೆಯನ್ನು ಈ ಗೀತೆ ಪಡೆದಿದೆ.
ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನ್ಯಾಯಾಂಗ ವ್ಯವಸ್ಥೆಯ ಬೆನ್ನೆಲುಬಾಗಿ ನಿಂತಿರುವ ವಕೀಲರ ಸೇವೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಹೆಸರಾಂತ ವಕೀಲರಾದ ನಾರಾಯಣಸ್ವಾಮಿ ಜಿ ಈ ವಿಶೇಷ ಪರಿಕಲ್ಪನೆಯನ್ನು ರೂಪಿಸಿದ್ದಾರೆ. ವೃತ್ತಿ ಬಾಂಧವರ ಮೇಲಿನ ಪ್ರೀತಿ ಮತ್ತು ಗೌರವವೇ ಈ ಆಲ್ಬಮ್‌ಗೆ ಪ್ರೇರಣೆಯಾಗಿದ್ದು, ಅವರು ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಈ ಗೀತೆಗೆ ಜನಪ್ರಿಯ ಸಂಗೀತ ಸಂಯೋಜಕಿ ಮಾನಸ ಹೊಳ್ಳ ಸಂಗೀತ ನೀಡಿದ್ದು, ನ್ಯಾಯದ ಗಂಭೀರತೆ ಮತ್ತು ಹೋರಾಟದ ಕಿಚ್ಚು ಎರಡನ್ನೂ ಒಳಗೊಂಡ ಇಂಪಾದ ಸ್ವರಗಳನ್ನು ನೀಡಿದ್ದಾರೆ. ಸಾಹಿತ್ಯ ರಚನೆ ಹಾಗೂ ಧ್ವನಿಯನ್ನು ಕರಿಬಸವ ತಡಕಲ್ ನೀಡಿದ್ದಾರೆ. ಅನುಭವಿ ನಿರ್ದೇಶಕ ಜೀವನ್ ಹಳ್ಳಿಕಾರ್ ದೃಶ್ಯ ರೂಪದಲ್ಲಿ ವಕೀಲರ ವೃತ್ತಿಜೀವನದ ಸವಾಲುಗಳನ್ನು ಮನಮುಟ್ಟುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
ಒಂದೇ ಹಾಡಿನಲ್ಲಿ ಸಂವಿಧಾನದ ಆಶಯ, ನ್ಯಾಯದ ಮಹತ್ವ ಹಾಗೂ ಕಾನೂನು ಪಾಲನೆಯ ಅನಿವಾರ್ಯತೆಯನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶ ಈ ಗೀತೆಯದ್ದಾಗಿದೆ. “ವಕೀಲರ ಜೀವನ ಸವಾಲುಗಳಿಂದ ಕೂಡಿದ್ದರೂ, ನ್ಯಾಯ ಸಿಕ್ಕಾಗ ಸಿಗುವ ಸಂತೋಷವೇ ದೊಡ್ಡದು. ಸಮಾಜದಲ್ಲಿ ವಕೀಲರ ಬಗ್ಗೆ ಗೌರವ ಹೆಚ್ಚಿಸುವ ಆಶಯದಿಂದ ಈ ಆಲ್ಬಮ್ ಹೊರತರುತ್ತಿದ್ದೇವೆ” ಎಂದು ನಾರಾಯಣಸ್ವಾಮಿ ತಿಳಿಸಿದ್ದಾರೆ.
ನ್ಯಾಯ, ಧೈರ್ಯ ಮತ್ತು ಮಾನವೀಯತೆಯ ಸಂದೇಶ ಹೊತ್ತ ‘ನ್ಯಾಯ–ಅನ್ಯಾಯ’ ಈಗಾಗಲೇ ಜನಮನ ಗೆಲ್ಲುವತ್ತ ಪಯಣ ಆರಂಭಿಸಿದೆ.



























