
ಸಂಜೆವಾಣಿ ನ್ಯೂಸ್
ಮೈಸೂರು: ಏ.07:- ಕುಡಿಯುವ ನೀರು, ಒಳಚರಂಡಿ ಶುಲ್ಕ ಏರಿಕೆಯನ್ನು ಮಹಾನಗರಪಾಲಿಕೆ ವಾಪಸ್ ಪಡೆಯಬೆÉೀಕೆಂದು ಒತ್ತಾಯಿಸಿ ಭಾರತ ಕಮ್ಯುನಿಷ್ಟ್ ಪಕ್ಷದ ವತಿಯಿಂದ ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಏ.1ರಿಂದ ಜಾರಿಗೆ ಬರುವಂತೆ ಕುಡಿಯುವ ನೀರು, ಒಳಚರಂಡಿ ಶುಲ್ಕ ಏರಿಕೆ ಮಾಡಿದ್ದು, ಪಾಲಿಕೆ ವ್ಯಾಪ್ತಿಯ ನಿವಾಸಿಗಳು ್ಲ ಅನವಶ್ಯಕ ಹೆಚ್ಚಳವನ್ನು ಎದುರಿಸಬೇಕಾಗಿದೆ. ಗೃಹಬಳಕೆಯ ನೀರಿನ ಶುಲ್ಕವನ್ನು ಬಳಕೆಯ ಮಟ್ಟ ಆಧರಿಸಿ ಸ್ಲ್ಯಾಬ್ ಪದ್ಧತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಳಕೆ ಆಧಾರಿತ ಬಿಲ್ಲಿಂಗ್ ಜತೆಗೆ ಕನಿಷ್ಠ ಅಥವಾ ಬಳಕೆಯಿಲ್ಲದ ಮನೆಗಳಿಗೂ ಪಾಲಿಕೆ ಕನಿಷ್ಠ ಮಾಸಿಕ ಶುಲ್ಕ ಕಡ್ಡಾಯಗೊಳಿಸಿದೆ. ಇದು ಸಮರ್ಥನೀಯವಲ್ಲ. ಪರಿಷ್ಕೃತ ನೀರಿನ ದರದ ಜತೆಗೆ ಒಳಚರಂಡಿ ಶುಲ್ಕವನ್ನೂ ನವೀಕರಿಸಿದೆ. ಪಾಲಿಕೆ ವ್ಯಾಪ್ತಿಯಲ್ಲಿ ನಿವಾಸಿಗಳು ಈಗಾಗಲೇ ಅಸ್ತಿ ತೆರಿಗೆಯಲ್ಲಿ ಹೆಚ್ಚಳ ಎದುರಿಸುತ್ತಿರುವ ಈ ಸಮಯದಲ್ಲಿ ನೀರು ಮತ್ತು ಒಳಚರಂಡಿ ಶುಲ್ಕಗಳ ಅವೈಜ್ಞಾನಿಕ ಪರಿಷ್ಕರಣೆ ಸರಿಯಲ್ಲ ಎಂದು ಕಿಡಿ ಕಾರಿದರು.
ಈ ತೀರ್ಮಾನವನ್ನು ಮೈಸೂರಿನ ನಾಗರಿಕರು ಒಪ್ಪಲು ಸಾಧ್ಯವಿಲ್ಲ ಮತ್ತು ಸಿದ್ದರಿಲ್ಲ. ಚುನಾಯಿತ ಪ್ರತಿನಿಧಿಗಳೇ ಇಲ್ಲದಿರುವ ಮಹಾನಗರ ಪಾಲಿಕೆಯ ಅಧಿಕಾರಶಾಹಿಗೆ ಚರ್ಚೆಗೆ ಆಸ್ಪದವೇ ಇಲ್ಲದೇ ನಗರ ನಿರ್ವಹಣೆಯ ಹೆಸರಿನಲ್ಲಿ ಜನರ ಮೇಲೆ ಶುಲ್ಕಭಾರ ಹೇರುವುದು ಖಂಡನಾರ್ಹ. ನಗರವಾಸಿಗಳ ಮೂಲ ಅವಶ್ಯಕತೆಗಳನ್ನು ಉಚಿತವಾಗಿ ಅಥವಾ ಆದಷ್ಟು ಕಡಿಮೆ ವೆಚ್ಚದಲ್ಲಿ ನೀಡುವುದು ಸ್ಥಳೀಯ ಸಂಸ್ಥೆಗಳ ಉದ್ದೇಶ ಮತ್ತು ಆಶಯವಾಗಿರಬೇಕು. ಬಡ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಶುಲ್ಕದ ಹೊರೆ ಹೊರಿಸಿ ಪ್ರಾಕೃತಿಕ ಸಂಪನ್ಮೂಲಗಳನ್ನು ಆರ್ಥಿಕ ಲಾಭಕ್ಕಾಗಿ ಲೂಟಿ ಹೊಡೆಯುವ ಇನ್ನೊಂದು ವರ್ಗವನ್ನು ಓಲೈಸುವ ಈ ಪೃವೃತ್ತಿ ಬದಲಾಗಬೇಕು. ಕೂಡಲೇ ನೀರು ಮತ್ತು ಒಳಚರಂಡಿ ಶುಲ್ಕ ಏರಿಕೆ ಕೈಬಿಟ್ಟು, ನಗರದ ಮೂಲಭೂತ ಸಮಸ್ಯೆಗಳಾದ ರಸ್ತೆ, ದೀಪ, ನೈರ್ಮಲ್ಯಗಳ ಕಡೆಗೆ ಗಮನಹರಿಸಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಜಿಲ್ಲಾ ಸಮಿತಿ ಸದಸ್ಯರಾದ ಜಿ.ಜಯರಾಂ, ಕೆ.ಬಸವರಾಜ್, ಎನ್.ವಿಜಯ್ ಕುಮಾರ್, ಸ್ಥಳೀಯ ಸಮಿತಿ ಕಾರ್ಯದರ್ಶಿ ಎನ್.ಸುಬ್ರಹ್ಮಣ್ಯ, ಸದಸ್ಯರಾದ ರಾಜೇಂದ್ರ, ಬಸವಯ್ಯ, ಅಣ್ಣಪ್ಪ, ಬಲರಾಂ, ಈಶ್ವರ್, ಬೀರೇಶ್ವರ್, ಪುಟ್ಟಮಲ್ಲಯ್ಯ, ಅಭಿ, ಶ್ರೀಧರ್, ಸೇರಿದಂತೆ ಹಲವರು ಭಾಗವಹಿಸಿದ್ದರು.























