Home ಜಿಲ್ಲೆ ಮೈಸೂರು ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ

ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಿ

ಸಂಜೆವಾಣಿ ನ್ಯೂಸ್
ಮೈಸೂರು: ಏ.07:-
ಸಾರ್ವಜನಿಕರಿಂದ ಮೂಲಸೌಕರ್ಯ ಕಲ್ಪಿಸಲು ಬೇಡಿಕೆ ಇರುವುದರಿಂದ ಹೂಟಗಳ್ಳಿ ನಗರಸಭೆ ವ್ಯಾಪ್ತಿಗೆ ಬರುವ ಕೂರ್ಗಳ್ಳಿ ಪ್ರದೇಶದ ವಿವಿಧ ಬೀದಿಗಳ ಅಭಿವೃದ್ಧಿಗೆ ಕಾಯಕಲ್ಪ ಶುರುವಾಗಿದ್ದು, ಶಾಸಕ ಜಿ.ಟಿ.ದೇವೇಗೌಡ ಗುದ್ದಲಿಪೂಜೆ ನೆರವೇರಿಸಿದರು.

ಕೆಆರ್‍ಎಸ್ ರಸ್ತೆಯಲ್ಲಿರುವ ಕೂರ್ಗಳ್ಳಿ ಬಳಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 8.70 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಹಲವು ದಿನಗಳ ಬೇಡಿಕೆಯಂತೆ ಹೂಟಗಳ್ಳಿ ನಗರಸಭೆಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ. ನಿಗದಿತ ಅವಧಿಯೊಳಗೆ ಕಾಮಗಾರಿ ಮುಗಿಸಬೇಕು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ನಡೆಸಬೇಕು ಎಂದು ಸೂಚಿಸಿದರು.

ಸ್ಥಳೀಯ ಜನರು ಒಳಚರಂಡಿ, ಕುಡಿಯುವ ನೀರು, ಸಿಸಿ ಚರಂಡಿ, ರಸ್ತೆ, ಬೀದಿದೀಪ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸುವಂತೆ ಬೇಡಿಕೆ ಇಟ್ಟಿದ್ದರು. ಬಡಾವಣೆಗೆ ಬಂದಾಗ ಅನೇಕ ಸಮಸ್ಯೆ ನೋಡಿದ್ದೆ. ಈಗ ಎಲ್ಲಾ ಬೀದಿಗಳಿಗೂ ಚರಂಡಿ, ಸಿಸಿ ರಸ್ತೆ, ಒಳಚರಂಡಿ ಕಾಮಗಾರಿ ಮಾಡಲಾಗುವುದು. ಅದೇ ರೀತಿ ಕೂರ್ಗಳ್ಳಿ ಕೆಆರ್‍ಎಸ್ ರಸ್ತೆಯ ಆಟೋಮೋಟಿವ್ ಆಕ್ಸಲ್ ವೃತ್ತದಿಂದ ಡ್ಯಾಮ್‍ಡನ್ ಅಪಾರ್ಟ್‍ಮೆಂಟ್ ಹತ್ತಿರದ ರಿಂಗ್ ರಸ್ತೆಯವರೆಗೆ ಚರಂಡಿ, ರಸ್ತೆ ಅಭಿವೃದ್ದಿ ಕಾಮಗಾರಿ ನಡೆಯಲಿದೆ ಎಂದು ವಿವರಿಸಿದರು.

ಸಾರ್ವಜನಿಕರ ಸಮಸ್ಯೆ ಆಲಿಸಿದ ಜಿಟಿಡಿ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಜಿ.ಟಿ.ದೇವೇಗೌಡರು ಸಾರ್ವಜನಿಕರ ಸಮಸ್ಯೆ ಆಲಿಸಿದರು. ಕುಡಿಯುವ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ. ಬೋರ್‍ವೆಲ್ ನೀರು ಬತ್ತಿ ಹೋಗಿರುವ ಕಾರಣ ಟ್ಯಾಂಕರ್ ನೀರು ಪೂರೈಸಬೇಕು. ವಾರದಲ್ಲಿ ಮೂರು ದಿನ ನೀರು ಪೂರೈಕೆಯಾಗುತ್ತಿದ್ದು, ಎರಡು ದಿನಕ್ಕೊಮ್ಮೆ ನೀರು ಬಿಡುವಂತೆ ಮಾಡಬೇಕು ಎಂದು ಕೋರಿದರು. ಮತ್ತೊಬ್ಬರು ಯುಜಿಡಿ ನೀರು ಹರಿಯುತ್ತಿದ್ದು, ಬೇರೆ ಕಡೆ ಮಾರ್ಗಕ್ಕೆ ಸಂಪರ್ಕ ಕೊಡಬೇಕು. ಮುಖ್ಯರಸ್ತೆಯಲ್ಲಿರುವ ಫ್ಯಾಕ್ಟರಿಯಿಂದ ಹೊರ ಬರುವ ಹೊಗೆಯಿಂದ ಉಸಿರಾಟಕ್ಕೆ ತುಂಬಾ ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗಳು, ಪರಿಸರ ಮಂಡಳಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಹೊಗೆಯಿಂದ ಆಗುವ ಸಮಸ್ಯೆ ತಪ್ಪಿಸಿಲ್ಲ ಎಂದು ಶಾಸಕರ ಮುಂದೆ ಹೇಳಿಕೊಂಡರು.

ಕುಡಿಯುವ ನೀರಿನ ಟ್ಯಾಂಕ್ ದುರಸ್ತಿಗೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ನಾವು ಕಾಮಗಾರಿ ಶುರು ಮಾಡಲು ರೆಡಿ ಇದ್ದೇವೆ. ಆದರೆ, ಕೆಐಎಡಿಬಿ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದರು. ತಕ್ಷಣವೇ ದೂರವಾಣಿ ಮೂಲಕ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗೂ ಈ ರೀತಿ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ. ಉಂಡುವಾಡಿ ಯೋಜನೆ ಸಂಪರ್ಕ ಆರಂಭವಾದ ಮೇಲೆ ಕೆಐಎಡಿಬಿ ಟ್ಯಾಂಕ್ ಬಳಸುವುದಿಲ್ಲ. ಅಲ್ಲಿಯತನಕ ಬಳಸಲು ಅವಕಾಶ ಕೊಡಿ. ಕುಡಿಯುವ ನೀರಿನ ವಿಚಾರದಲ್ಲಿ ಆಗುವ ಸಮಸ್ಯೆಗಳನ್ನು ಇತ್ಯರ್ಥಪಡಿಸಬೇಕು. ಬಡಾವಣೆಗೆ ಹೆಚ್ಚುವರಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಬೇಕು ಎಂದರು.

ಹೆಚ್ಚುವರಿ ಬಸ್ ವ್ಯವಸ್ಥೆ: ಬೆಳಗ್ಗೆ ಮತ್ತು ಸಂಜೆ ನಗರ ಸಾರಿಗೆ ಬಸ್‍ಗಳ ಸಂಚಾರ ಇಲ್ಲದೆ ಮುಖ್ಯರಸ್ತೆಗೆ ನಡೆದುಕೊಂಡು ಹೋಗಬೇಕಾದ ಸನ್ನಿವೇಶ ಇದೆ ಎಂದು ಮಹಿಳೆಯರು ಶಾಸಕರಿಗೆ ಅಲವತ್ತುಕೊಂಡರು. ಕೂಡಲೇ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ.ವೀರೇಶ್ ಜತೆ ಮಾತನಾಡಿದ ಜಿ.ಟಿ.ದೇವೇಗೌಡರು, ಬೆಳಗ್ಗೆ 9.30ರವರೆಗೆ ಹಾಗೂ ಸಂಜೆ 4.30ರವರೆಗೆ ಹೆಚ್ಚುವರಿಯಾಗಿ ಎರಡು ಬಸ್‍ಗಳ ರೂಟ್ ಕಲ್ಪಿಸಬೇಕು ಎಂದು ಸೂಚಿಸಿದರು. ಇದಕ್ಕೆ ಒಪ್ಪಿದ ಅಧಿಕಾರಿಗಳು, ಮಂಗಳವಾರದಿಂದಲೇ ಸಂಚಾರ ಮಾಡಲಿದೆ ಎಂದು ಭರವಸೆ ನೀಡಿದರು. ನಂತರ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿದ ಶಾಸಕರು ಹಲವಾರು ಸಮಸ್ಯೆಗಳನ್ನು ಆಲಿಸಿದರು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಕಾಮಗಾರಿ ಶುರು ಮಾಡಲಾಗುವುದು. ಅಭಿವೃದ್ಧಿ ಮಾಡಲೇಬೇಕೆಂದು ಗ್ರಾಪಂನ್ನು ನಗರಸಭೆಯನ್ನಾಗಿ ಮಾಡಿಸಿದ್ದೇನೆ. ಈಗ ಅನುದಾನ ಬಿಡುಗಡೆ ಆಗಿರುವುದರಿಂದ ಕಾಮಗಾರಿಗಳು ಪ್ರಾರಂಭವಾಗಲಿದೆ ಎಂದರು.

ನಗರಸಭೆ ಪೌರಾಯುಕ್ತ ಬಿ.ಎನ್.ಚಂದ್ರಶೇಖರ್, ಎಇಇ ಮಧು, ಇಂಜಿನಿಯರ್ ದಿಲೀಪ್, ಜೂನಿಯರ್ ಇಂಜಿನಿಯರ್ ಸದಾಶಿವಪ್ಪ, ಜಿಪಂ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವು,ತಾಪಂ ಮಾಜಿ ಸದಸ್ಯ ಸತೀಶ್,ಮುಖಂಡರಾದ ಪಟೇಲ್ ರಾಮಣ್ಣ, ನಂಜುಂಡೇಗೌಡ, ಚನ್ನೇಗೌಡ, ಬೋರೇಗೌಡ, ಮಹೇಶ್ ಮತ್ತಿತರರು ಹಾಜರಿದ್ದರು.