
‘ಕಟ್ಲೆ’ ಚಿತ್ರದ ಟ್ರೇಲರ್–ಹಾಡುಗಳಿಗೆ ಅದ್ದೂರಿ ಅನಾವರಣ
ಹಾಸ್ಯ ಪಾತ್ರಗಳ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಕೆಂಪೇಗೌಡ ಅವರು ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘ಕಟ್ಲೆ’ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮಕ್ಕೆ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥ್‌ನಾರಾಯಣ, ಮಂಡ್ಯ ಶಾಸಕ ರವಿಕುಮಾರ್ ಗೌಡ (ಗಾಣಿಗ), ಬಿಗ್‌ಬಾಸ್ ಖ್ಯಾತಿಯ ಪ್ರಥಮ್ ಹಾಗೂ ಕಾಕ್ರೋಚ್ ಸುಧಿ ಚಾಲನೆ ನೀಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಶ್ರೀವಿಧಾ ಅಭಿನಂದನ್ ಕಥೆ–ಚಿತ್ರಕಥೆ–ಸಂಭಾಷಣೆ ಬರೆದು ಚಿತ್ರವನ್ನು ನಿರ್ದೇಶಿಸಿದ್ದು, ಹೊಸಕೋಟೆ ಮೂಲದ ಭರತ್ ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ.
ಈ ವೇಳೆ ನಿರ್ದೇಶಕ ಶ್ರೀವಿಧಾ ಅಭಿನಂದನ್ ಮಾತನಾಡಿ, “‘ಕಟ್ಲೆ’ ಎಂಬ ಪದಕ್ಕೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ವಿಭಿನ್ನ ಅರ್ಥಗಳಿವೆ. ನಮ್ಮ ಸಿನಿಮಾದಲ್ಲಿ ಅದು ‘ಅವಧಿ’ ಅಥವಾ ‘ಕಾಲ’ ಎಂಬ ಅರ್ಥ ಹೊತ್ತು ಬರುತ್ತದೆ. ಪ್ರತಿಯೊಂದು ಜೀವಕ್ಕೂ ಕಾಲವಿದೆ; ಅದು ತಪ್ಪಿದರೆ ಬದುಕು ಸ್ಥಗಿತಗೊಳ್ಳುತ್ತದೆ. ಈ ತತ್ವದ ಸುತ್ತ ಕಥೆ ಸಾಗುತ್ತದೆ. ಕಟ್ಲೆ ನಗಿಸುತ್ತದೆ, ಅಳಿಸುತ್ತದೆ, ಕಾಡಿಸುತ್ತದೆ. ಕೊನೆಯಲ್ಲಿ ಸ್ಪಷ್ಟ ಸಂದೇಶದೊಂದಿಗೆ ಮುಕ್ತಾಯಗೊಳ್ಳುತ್ತದೆ” ಎಂದು ಹೇಳಿದರು.
ನಾಯಕ ಕೆಂಪೇಗೌಡ ಮಾತನಾಡಿ, “18 ವರ್ಷಗಳ ಸಿನಿ ಪಯಣದಲ್ಲಿ 75ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ಈಗ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ಕೇವಲ ಹಾರರ್ ಅಥವಾ ಥ್ರಿಲ್ಲರ್ ಅಲ್ಲ, ಪ್ರತಿಯೊಬ್ಬರಿಗೂ ಇಷ್ಟವಾಗುವ ‘ಫುಲ್ ಮೀಲ್ಸ್’ ಸಿನಿಮಾ. ಇಂಜಿನಿಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕ್ಲೈಮಾಕ್ಸ್ ದೃಶ್ಯಗಳು ಪ್ರೇಕ್ಷಕರ ಕಣ್ಣನ್ನು ಒದ್ದೆಮಾಡುತ್ತವೆ” ಎಂದರು.
ಚಿತ್ರದಲ್ಲಿ ಸನ್ಮಿತ ಮತ್ತು ಅಮೃತ ನಾಯಕಿಯರಾಗಿ ನಟಿಸಿದ್ದು, ಮತ್ತೊಂದು ಪ್ರಮುಖ ಪಾತ್ರದಲ್ಲಿ ಹರ್ಷಿಕಾ ಪೂರ್ಣಚ್ಚ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಟೆನ್ನಿಸ್ ಕೃಷ್ಣ, ತಬಲ ನಾಣಿ, ಹರೀಶ್ ರಾಜ್, ಗಣೇಶ್ ರಾವ್ ಕೇಸರಕರ್, ಪವನ್ ಕುಮಾರ್, ಬಿರಾದಾರ್, ಎಂ.ಎಸ್. ಉಮೇಶ್, ಯತಿರಾಜ್, ಕರಿಸುಬ್ಬು ಸೇರಿದಂತೆ ದೊಡ್ಡ ತಾರಾಬಳಗ ಚಿತ್ರದಲ್ಲಿದೆ. ಬೆಂಗಳೂರು, ಸಿರ್ಸಿ ಮತ್ತು ಮಲೆನಾಡಿನ ವಿವಿಧ ತಾಣಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ.
ಡಾ. ವಿ. ನಾಗೇಂದ್ರ ಪ್ರಸಾದ್, ಭರ್ಜರಿ ಚೇತನ್ ಕುಮಾರ್ ಹಾಗೂ ಕಿನ್ನಾಳ್ ರಾಜ್ ಸಾಹಿತ್ಯ ಬರೆದಿರುವ ಹಾಡುಗಳಿಗೆ ಶ್ರೀಧರ್ ವಿ. ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಅನಿರುದ್ಧ್ ಛಾಯಾಗ್ರಹಣ, ಚಲುವಮೂರ್ತಿ ಸಂಕಲನ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮತ್ತು ಭಜರಂಗಿ ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ.ಚಿತ್ರವನ್ನು ಸಚಿತ್ ಫಿಲಂಸ್ ಮೂಲಕ ವೆಂಕಟ್ ಗೌಡ ಸುಮಾರು 75 ಕೇಂದ್ರಗಳಲ್ಲಿ ಬಿಡುಗಡೆ ಮಾಡುವ ಯೋಜನೆ ರೂಪಿಸಿಕೊಂಡಿದ್ದಾರೆ.
























