Home ಜಿಲ್ಲೆ ನಾಪತ್ತೆಯಾಗಿದ್ದ ಚೀಟಿ ವೆಂಕಟೇಶ್ ಬಂಧನ

ನಾಪತ್ತೆಯಾಗಿದ್ದ ಚೀಟಿ ವೆಂಕಟೇಶ್ ಬಂಧನ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಮಾ.15: ಕಳೆದ ಎರೆಡು ತಿಂಗಳಿಂದ ನಾಪತ್ತೆಯಾಗಿದ್ದ ಹಾವಂಬಾಯಿ ಪ್ರದೇಶದ  ನಿವಾಸಿ ಚೀಟಿ ವೆಂಕಟೇಶ್ ನನ್ನು ಬ್ರೂಸ್ ಪೇಟೆ ಪೊಲೀಸರು ಬಂಧಿಸಿ ನಿನ್ನೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

ನಾಪತ್ತೆಯಾಗಿದ್ದ ವೆಂಕಟೇಶ್ ಹಲವಾರು ವರ್ಷಗಳಿಂದ ಚೀಟಿ ವ್ಯವಹಾರ ಮಾಡುತ್ತಿದ್ದ. ಲಕ್ಷಾಂತರ ರೂಗಳ ಚೀಟಿ ಹಾಕುತ್ತಿದ್ದ. ನಗರದಲ್ಲಿನ ಬಹುತೇಕ ವ್ಯಾಪಾರಿಗಳು, ವೈದ್ಯರು, ಅಂಗಡಿ ಮುಂಗಟ್ಟುಗಳ ಮಾಲೀಕರು, ಸಾರ್ವಜನಿಕರು  ಪ್ರತಿ ತಿಂಗಳು ಚೀಟಿ ವ್ಯವಹಾರ ಮಾಡಿದ್ದರು.

ಕೋಟ್ಯಾಂತರ ರೂ ಗಳ ಚೀಟಿ ವ್ಯವಹಾರ ಈತನದಾಗಿತ್ತು. ಆದರೆ ಈತ ಜ.30 ರಂದು ರಾತ್ರಿ ನಗರದ ಬೆಂಗಳೂರು ರಸ್ತೆಯ ಹೆಚ್.ಎಲ್.ಸಿ.ಕಾಲುವೆ ಬಳಿ ತನ್ನ ಬೈಕ್ ಬಿಟ್ಟು, ಅದರಲ್ಲಿ ತನ್ನ ಎರೆಡು ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ.

ಮನೆಯವರು ಈತನ ಬಗ್ಗೆ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಆದರೆ ಮಾರುಕಟ್ಟೆಯಲ್ಲಿ ಈತ ಪೂರ್ವ ನಿರ್ಧಾರಿತನಾಗಿ ಐಪಿ ಇಟ್ಟು ಜನರಿಗೆ ವಂಚನೆ ಮಾಡಿ ತಲೆ ಮರೆಸಿಕೊಂಡಿದ್ದಾನೆ ಆತನನ್ನು ಪತ್ತೆಹಚ್ಚಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು   ಆತನಿಗೆ ಹಣ ಕಟ್ಟಿದ್ದ ಜನ ಅಗ್ರಹಿಸಿದ್ದರು.