Home ಜಿಲ್ಲೆ ಮಂಗಳೂರು ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ರಾಷ್ಟ್ರೀಯ ನೌಕಯಾನ ದಿನಾಚರಣೆ

ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ರಾಷ್ಟ್ರೀಯ ನೌಕಯಾನ ದಿನಾಚರಣೆ

ಮಂಗಳೂರು- ಭಾರತದ ಆರ್ಥಿಕತೆಯನ್ನು ಬಲಪಡಿಸುವಲ್ಲಿ ನಾವಿಕರ ಪಾತ್ರ ಅನನ್ಯ ಜಾಗತಿಕ ವ್ಯಾಪಾರಕ್ಕೆ ಅವರ ಸಮರ್ಪಣಾ ಮನೋಭಾವವೇ ಮೂಲಾಧಾರ ಎಂದು ಎಂದು ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದ್ದಾರೆ.
ನವ ಮಂಗಳೂರು ಬಂದರು ಪ್ರಾಧಿಕಾರವು (ಎನ್‌ಎಂಪಿಎ) ಭಾರತದ ಭವ್ಯ ಸಮುದ್ರಯಾನ ಪರಂಪರೆಯನ್ನು ಸ್ಮರಿಸುವ ಮತ್ತು ನಾವಿಕರ ಸೇವೆಯನ್ನು ಗೌರವಿಸುವ ನಿಟ್ಟಿನಲ್ಲಿ ಪಣಂಬೂರಿನ ಜೆಎನ್ಸಿ ಸಭಾಂಗಣದಲ್ಲಿ ಸೋಮವಾರ ನಡೆದ ’ಮರ್ಚೆಂಟ್ ನೇವಿ ಸಪ್ತಾಹ’ ಸಮಾರೋಪ ೬೩ನೇ ರಾಷ್ಟ್ರೀಯ ನೌಕಾಯಾನ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎನ್‌ಎಂಪಿಎ ಉಪಾಧ್ಯಕ್ಷೆ ಎಸ್. ಶಾಂತಿ ಮಾತನಾಡಿ ಬಂದರು ವಲಯದ ಅಭಿವೃದ್ಧಿಗೆ ಪಾಲುದಾರರು ಮತ್ತು ನೌಕರರ ನಡುವಿನ ಸಹಯೋಗ ಅತ್ಯಗತ್ಯ ಎಂದು ತಿಳಿಸಿದರು. ಮುಖ್ಯ ಅತಿಥಿ ಡಾ. ಆರ್. ಕೆ. ನಾಯರ್ ಅವರು ಸಮುದ್ರಯಾನ ಕ್ಷೇತ್ರದಲ್ಲಿ ಪರಿಸರ ಸುಸ್ಥಿರತೆ ಮತ್ತು ಜವಾಬ್ದಾರಿಯುತ ಕಾರ್ಯಾಚರಣೆಯ ಮಹತ್ವದ ಬಗ್ಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಎನ್‌ಎಂಪಿಎನ ನಾವಿಕರ ಸ್ಮಾರಕದ ಬಳಿ ಪುಷ್ಪಗುಚ್ಚ ಅರ್ಪಿಸುವ ಕಾರ್ಯಕ್ರಮ ನಡೆಯಿತು. ಬಂದರಿನ ಹಿರಿಯ ಅಧಿಕಾರಿಗಳು, ನೌಕರರು ಹಾಗೂ ವಿವಿಧ ಪಾಲುದಾರರು ಉಪಸ್ಥಿತರಿದ್ದು ಪುಷ್ಪನಮನ ಸಲ್ಲಿಸಿದರು.
ವೇದಿಕೆಯಲ್ಲಿ ಮರ್ಚೆಂಟ್ ನೇವಿ ಡೇ ಆಚರಣಾ ಸಮಿತಿ ಅಧ್ಯಕ್ಷ ಕ್ಯಾಪ್ಟನ್ ಮನೋಜ್ ಜೋಶಿ ಹಾಗೂ ಮಂಗಳೂರು ಎಂಎಂಡಿಯ ಸರ್ವೇಯರ್ ಇನ್ ಚಾರ್ಜ್ ಉಬೈದು ರೆಹಮಾನ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸಪ್ತಾಹದ ಪ್ರಮುಖ ಕಾರ್ಯಕ್ರಮಗಳು: ಮಾರ್ಚ್ ೨೮ ರಿಂದ ಎಪ್ರಿಲ್ ೫ ರವರೆಗೆ ನಡೆದ ಈ ಸಪ್ತಾಹದಲ್ಲಿ ಕ್ರಿಕೆಟ್ ಪಂದ್ಯಾವಳಿ, ಟ್ರೆಷರ್ ಹಂಟ್, ಹಗ್ಗಜಗ್ಗಾಟ ಮತ್ತು ಮಹಿಳಾ ನೌಕರರಿಗೆ ದ್ರೋಬಾಲ್ ಸ್ಪರ್ಧೆ, ಪಣಂಬೂರು ಬೀಚ್ ಸ್ವಚ್ಛತಾ ಅಭಿಯಾನ ಹಾಗೂ ಶ್ರೀನಿವಾಸ ಪೋರ್ಟ್ ಆಸ್ಪತ್ರೆಯಲ್ಲಿ ರಕ್ತದಾನ ಸಮುದ್ರಯಾನ ಕಾಯ್ದೆ ೨೦೨೫ರ ಕುರಿತು ವಿಚಾರಸಂಕಿರಣ, ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಚಿತ್ರಕಲೆ ಸ್ಪರ್ಧೆ ಹಾಗೂ ಆಕಾಶವಾಣಿಯಲ್ಲಿ ವಿಶೇಷ ಭಾಷಣ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಮರ್ಚೆಂಟ್ ನೇವಿ ಫ್ಲ್ಯಾಗ್ ಪಿನ್ ಮಾಡುವ ಮೂಲಕ ವಿಶೇಷ ಗೌರವ ಸಲ್ಲಿಸಲಾಯಿತು.
ಅಂತಿಮವಾಗಿ ಮ್ಯಾರಥಾನ್ ಮತ್ತು ಸಮುದ್ರಯಾನ ದಿನಾಚರಣೆಯೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.