
ನವದೆಹಲಿ,ನ.೧೮- ಕೆಂಪು ಕೋಟೆ ಸ್ಫೋಟದ ತನಿಖೆಗೆ ಸಂಬಂಧಿಸಿದಂತೆ ಹರಿಯಾಣದಲ್ಲಿರುವ ಅಲ್-ಫಲಾಹ್ ವಿಶ್ವವಿದ್ಯಾಲಯ ಮತ್ತು ಅದರ ಜೊತೆ ಸಂಬಂಧ ಹೊಂದಿದ ವ್ಯಕ್ತಿಗಳಿಗೆ ಸಂಬಂಧಿಸಿದಂತೆ ದೆಹಲಿ ಹಾಗೂ ಫರಿದಾಬಾದ್‌ನ ೨೫ ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಶೋಧ ನಡೆಸಿದ್ದಾರೆ.
‘ವೈಟ್ ಕಾಲರ್’ ಫರಿದಾಬಾದ್ ಭಯೋತ್ಪಾದಕ ಘಟಕದಲ್ಲಿ ಆರೋಪಿಗಳಾಗಿದ್ದ ಇತರರು ಕೆಲಸ ಮಾಡಿದ ವಿಶ್ವವಿದ್ಯಾಲಯ ಮತ್ತು ಸಂಸ್ಥೆಯ ಮಾಲೀಕರನ್ನು ಒಳಗೊಂಡಂತೆ ಹಣಕಾಸಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಇಡಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್ ಎ) ಅಡಿ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದೆ.
ದೆಹಲಿಯಲ್ಲಿರುವ ವಿಶ್ವವಿದ್ಯಾಲಯದ ಪ್ರಧಾನ ಕಚೇರಿ ಮತ್ತು ಸಂಸ್ಥೆಯ ಟ್ರಸ್ಟಿಗಳ ಕಚೇರಿ ಮನೆಗಳ ಮೇಲೆ ಇಂದು ಮುಂಜಾನೆ ದಾಳಿ ನಡೆಸಲಾಗಿದೆ. ವಿಶ್ವವಿದ್ಯಾಲಯದ ಅಧ್ಯಕ್ಷ ಜಾವೇದ್ ಅಹ್ಮದ್ ಸಿದ್ದಿಕಿ ಅವರನ್ನು ಅವರ ನಿವಾಸದ ಮೇಲೂ ದಾಳಿ ನಡೆಸಿ ಪರಿಶೀಲನೆ ನಡೆಸಲಾಗುತ್ತಿದೆ.
ಭಯೋತ್ಪಾದಕ ಘಟಕಗಳ ಕೊತೆ ಸಂಪರ್ಕ ಹೊಂದಿರುವ ವಿಚಾರ ಬೆಳಕಿಗೆ ಬಂದ ನಂತರ ಭಾರತೀಯ ವಿಶ್ವವಿದ್ಯಾಲಯಗಳ ಸಂಘ (ಎಐಯು) ಅಲ್-ಫಲಾಹ್ ವಿಶ್ವವಿದ್ಯಾಲಯದ ಸದಸ್ಯತ್ವವನ್ನು ಈಗಾಗಲೇ ರದ್ದುಗೊಳಿಸಿದೆ. ವಿಶ್ವವಿದ್ಯಾಲಯದ ವಿರುದ್ಧ ದೆಹಲಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್‌ಗಳನ್ನು ದಾಖಲಿಸಿದ ಕೆಲ ದಿನಗಳ ನಂತರ ಇಡಿ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದೆ. ಒಂದು ಎಫ್‌ಐಆರ್ ವಂಚನೆ ಆರೋಪಗಳಿಗೆ ಸಂಬಂಧಿಸಿದ್ದಾಗಿದ್ದರೆ, ಎರಡನೆಯದನ್ನು ನಕಲಿ ದಾಖಲೆಗಳಿಗೆ ಸಂಬಂಧಿಸಿದ ವಿಭಾಗಗಳ ಅಡಿಯಲ್ಲಿ ದಾಖಲಾಗಿದೆ.
ಕೆಂಪುಕೋಟೆ ಬಳಿಯ ಸ್ಫೋಟಕ್ಕೆ ಕಾರಣನಾದ ಡಾ. ಉಮರ್ ಅಲ್ ನಬಿ ‘ಸುಸೈಡ್ ಬಾಂಬ್ ದಾಳಿ’ ಬಗ್ಗೆ ಸಾರ್ವಜನಿಕರಿಗೆ “ತಪ್ಪು ತಿಳುವಳಿಕೆ” ಇದೆ ಎಂದು ಹೇಳುವ ವೀಡಿಯೊ ಬೆಳಕಿಗೆ ಬಂದಿದೆ. ಈ ವೀಡಿಯೊವನ್ನು ಬೇರೆಯವರಲ್ಲಿ ಗೊಂದಲ ಸೃಷ್ಟಿಸಲು ಬಳಸಿದ್ದಾನೆ. ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ಸ್ಪಷ್ಟವಾದ ಇಂಗ್ಲಿಷ್‌ನಲ್ಲಿ ಮಾತನಾಡುವ ಡಾ. ಉಮರ್, “ಸುಸೈಡ್ ಬಾಂಬಿಂಗ್” ಎಂದು ಲೇಬಲ್ ಮಾಡಲ್ಪಟ್ಟಿರುವುದು ನಿಜವಾಗಿ ಇಸ್ಲಾಂನಲ್ಲಿ “ಶಹೀದ್ ಕಾರ್ಯಾಚರಣೆ” (ಮಾರ್ಟೈರ್‌ಡಮ್ ಆಪರೇಶನ್) ಎಂದು ವಿವರಿಸಿದ್ದಾನೆ. “ಇದರ ವಿರುದ್ಧ ಬಹಳಷ್ಟು ವಾದಗಳು ಮತ್ತು ವಿರೋಧಾಭಾಸಗಳಿವೆ. ಶಹೀದ್ ಕಾರ್ಯಾಚರಣೆ ಎಂದರೆ, ಒಬ್ಬ ವ್ಯಕ್ತಿ ಒಂದು ನಿರ್ದಿಷ್ಟ ಸ್ಥಳದಲ್ಲಿ ಮತ್ತು ನಿರ್ದಿಷ್ಟ ಸಮಯದಲ್ಲಿ ಖಂಡಿತವಾಗಿ ಸಾಯುತ್ತಾನೆ ಎಂದು ಊಹಿಸಿಕೊಂಡು, ಸಾವಿನ ನೈಸರ್ಗಿಕ ಊಹೆಗೆ ವಿರುದ್ಧವಾಗಿ ಕಾರ್ಯನಿರ್ವಹಿಸುವುದು,” ಎಂದು ಅವನು ವೀಡಿಯೊದಲ್ಲಿ ಸುಸೈಡ್ ಬಾಂಬರ್ ಬಗ್ಗೆ ಹೇಳಿದ್ದಾನೆ.
ರೆಡ್ ಫೋರ್ಟ್ ಸ್ಫೋಟವು (ನವೆಂಬರ್ ೧೦) ಆಕಸ್ಮಿಕವಾಗಿ ಸಂಭವಿಸಿದೆ ಎಂದು ಅಧಿಕಾರಿಗಳು ನಂಬಿದ್ದಾರೆ. ಆದರೆ, ಡಾ. ಉಮರ್ ಅಂತಿಮವಾಗಿ ಒಂದು ದೊಡ್ಡ ಮಟ್ಟದ ಸುಸೈಡ್ ಬಾಂಬ್ ದಾಳಿಯನ್ನು ನಡೆಸಲು ಯೋಜಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಫರಿದಾಬಾದ್ ಆತಂಕವಾದಿ ಮಾಡ್ಯೂಲ್‌ನ “ಉಮರ್ ಈ ವೀಡಿಯೊವನ್ನು ಮಾಡಿದ್ದಾನೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.
ನವೆಂಬರ್ ೧೦ ರ ಸ್ಫೋಟವು ಐತಿಹಾಸಿಕ ರೆಡ್ ಫೋರ್ಟ್‌ನ ಬಳಿಯಿರುವ ಜನನಿಬಿಡ ರಸ್ತೆಯನ್ನು ಪ್ರಕ್ಷುಬ್ಧಗೊಳಿಸಿದೆ. ಈ ಸ್ಫೋಟದಲ್ಲಿ ಕನಿಷ್ಠ ೧೫ ಜನರು ಮೃತಪಟ್ಟು ಮತ್ತು ೨೦ ಕ್ಕೂ ಹೆಚ್ಚು ಜನರು ಗಾಯಗೊಂಡರು. ಸ್ಫೋಟದ ರಭಸಕ್ಕೆ ಅಂಗಡಿಗಳ ಕಿಟಕಿಗಳು ಛಿದ್ರಗೊಂಡಿದ್ದು ಹಳೇ ದೆಹಲಿ ಪ್ರದೇಶದಲ್ಲಿ ಆತಂಕ ಸೃಷ್ಪಿಸಿತ್ತು.

ಯಾರು ಈ ಡಾ. ಉಮರ್
ಡಾ. ಉಮರ್ ಮೂಲತಃ ಪುಲ್ವಾಮಾದ ಕೋಯಿಲ್ ಗ್ರಾಮದವರು.ಆತನ ಸಂಬಂಧಿಕರು ಅವನನ್ನು ಶಾಂತ, ಅಂತರ್ಮುಖಿ ಮತ್ತು ಸ್ವಂತದಲ್ಲೇ ಇರುವ ವ್ಯಕ್ತಿ ಎಂದು ವರ್ಣಿಸಿದ್ದಾರೆ. ತನ್ನ ಹೆಚ್ಚಿನ ಸಮಯವನ್ನು ಓದಿಗೆ ಮೀಸಲಾಗಿರುತ್ತಿದ್ದ. ಪೊಲೀಸ್ ಮೂಲಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ಉಮರ್‌ನ ವರ್ತನೆ ಬದಲಾಗಿತ್ತು. ಅವನು ಅಕ್ಟೋಬರ್ ೩೦ ರಿಂದ ತನ್ನ ವಿಶ್ವವಿದ್ಯಾಲಯದ ಕರ್ತವ್ಯಗಳನ್ನು ಬಿಟ್ಟು ಫರಿದಾಬಾದ್ ಮತ್ತು ದೆಹಲಿಯ ನಡುವೆ ಆಗಾಗ್ಗೆ ಪ್ರಯಾಣಿಸಲು ಪ್ರಾರಂಭಿಸಿದ್ದ.
ರಾಮಲೀಲಾ ಮೈದಾನ ಮತ್ತು ಸುನೇಹರಿ ಮಸೀದಿಗೆ ಭೇಟಿ ಮಾಡುತ್ತಿದ್ದ. ಫರಿದಾಬಾದ್‌ನಲ್ಲಿ ನಡೆದ ದರೋಡೆಗಳ ನಂತರ ನವೆಂಬರ್ ೯ ರಂದು ಅವನು ಕಾಣೆಯಾಗಿದ್ದಾನೆ. ಈ ದರೋಡೆಗಳಲ್ಲಿ ಒಂದು ಗೋದಾಮಿನಿಂದ ಸುಮಾರು ೨,೯೦೦ ಕೆ.ಜಿ. ಅಮೋನಿಯಂ ನೈಟ್ರೇಟ್ ಪತ್ತೆಯಾಗಿತ್ತು ಮತ್ತು ಅವನ ಸಹಪಾಠಿಗಳಲ್ಲಿ ಕೆಲವರು ಬಂಧಿತರಾಗಿದ್ದರು. ಅವನು ಧೌಜ್ ಗ್ರಾಮದ ಬಳಿ ಅಡಗಿದ್ದು, ತನ್ನ ಐದು ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದಾನೆ ಎಂದು ನಂಬಲಾಗಿದೆ.
ತನಿಖೆಯ ಹಂತದಲ್ಲಿ, ಉಮರ್ ಮತ್ತು ಬಂಧಿತರಾದ ಡಾ. ಮುಜಮ್ಮಿಲ್ ಗನೈಜ್ ಟರ್ಕಿಗೆ ಭೇಟಿ ನೀಡಿದ್ದರು ಎಂದು ತನಿಖಾದಾರರು ಕಂಡುಹಿಡಿದಿದ್ದಾರೆ. ಅವರ ಹ್ಯಾಂಡ್ಲರ್ಸ್ ಟರ್ಕಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಸಂಶಯಿಸಲಾಗಿದೆ.
ಪಾಕಿಸ್ತಾನ ಆಧಾರಿತ ಜೈಶ್-ಎ-ಮೊಹಮ್ಮದ್ ಆತಂಕವಾದಿ ಸಂಘಟನೆಗೆ ಲಿಂಕ್ ಆಗಿರುವ ಈ ಮಾಡ್ಯೂಲ್‌ನಲ್ಲಿ ಒಂಬತ್ತರಿಂದ ಹತ್ತು ಸದಸ್ಯರಿದ್ದರು. ಇವರಲ್ಲಿ ಐದರಿಂದ ಆರು ಡಾಕ್ಟರ್‌ಗಳು ಸೇರಿದ್ದರು. ಈ ಡಾಕ್ಟರ್‌ಗಳು ಕಳಂಕಿತ ಆಲ್-ಫಲಾಹ್ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಸ್ಫೋಟಕಗಳಿಗೆ ರಾಸಾಯನಿಕಗಳು ಮತ್ತು ಸಾಮಗ್ರಿಗಳನ್ನು ಖರೀದಿಸಲು ತಮ್ಮ ವೈದ್ಯಕೀಯ ದಾಖಲೆಗಳನ್ನು ಬಳಸಿಕೊಂಡಿದ್ದರು.
ಸಾವಿನ ಸಂಖ್ಯೆ ೧೫ ಕ್ಕೆ ಏರಿಕೆ
ಈ ನಡುವೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದು ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ೧೫ಕ್ಕೆ ಏರಿಕೆಯಾಗಿದೆ.
ಮೃತ ವ್ಯಕ್ತಿಗಳನ್ನು ಲುಕ್ಮಾನ್ (೫೦) ಮತ್ತು ವಿನಯ್ ಪಾಠಕ್ (೫೦) ಎಂದು ಗುರುತಿಸಲಾಗಿದೆ. ತನಿಖಾಧಿಕಾರಿಗಳು ಇತ್ತೀಚಿನ ವರ್ಷಗಳಲ್ಲಿ ರಾಜಧಾನಿಯಲ್ಲಿ ನಡೆದ ಅತ್ಯಂತ ಮಹತ್ವದ ದಾಳಿಗಳಲ್ಲಿ ಒಂದಾದ ಭಯೋತ್ಪಾದಕ ಜಾಲದ ಸಂಪೂರ್ಣ ಜಾಲ ಬಹಿರಂಗ ಪಡಿಸಲು ಸಜ್ಜಾಗಿದ್ದಾರೆ.


































