
ಸಂಜೆವಾಣಿ ನ್ಯೂಸ್
ಮೈಸೂರು: ಮಾ.15:- ಕೇಂದ್ರ ಸರ್ಕಾರದಿಂದ ತಂಬಾಕು ಬೆಳೆಗಾರರಿಗೆ ನ್ಯಾಯ ಸಿಗುವ ನಿರೀಕ್ಷೆಯಲ್ಲಿದ್ದೇವೆ. ಆದರೆ, ರೈತರ ಹಿತ ಕಾಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ತಂಬಾಕು ಬೆಳೆಗಾರರಿಗೆ ಬೆಂಬಲ ಬೆಲೆ ಘೋಷಣೆ ಮಾಡಲಿ ಎಂದು ಮಾಜಿ ಸಚಿವ ಸಾ.ರಾ.ಮಹೇಶ್ ಹೇಳಿದರು.
ನಗರದಲ್ಲಿ ಈ ತಂಬಾಕು ಬೆಳೆ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಣಸೂರು ಪಿರಿಯಾಪಟ್ಟಣದಲ್ಲಿ ಹೆಚ್ಚು ತಂಬಾಕು ಬೆಳೆಯಲಾಗುತ್ತದೆ. ಇದು ಸಿಎಂ ಕ್ಷೇತ್ರ ಕೆಲ ನಾಯಕರು ಐಟಿಸಿ ಕಂಪನಿಗೆ ಬೀಗ ಹಾಕಲು ಹೋಗಿದ್ದರು. ರಾಜ್ಯದಲ್ಲಿ ನೀರಾವರಿ ರೈತರ ಸಮಸ್ಯೆಗೆ ಸ್ಪಂದಿಸೋದು ದೇವೇಗೌಡರ ಕುಟುಂಬ ಮಾತ್ರವಾಗಿದೆ. ಐಟಿಸಿ ಲಾಭಿಯಿಂದ ನಮ್ಮ ರೈತರಿಗೆ ಅನ್ಯಾಯ ಆಗ್ತಿದೆ ಅನ್ನೋ ಲಾಭಿ ಇದೆ. ಮುಕ್ತ ಮಾರುಕಟ್ಟೆಯಲ್ಲಿ ತಂಬಾಕು ಖರೀದಿಗೆ ಎಲ್ಲ ಕಂಪನಿಗೂ ಅವಕಾಶ ಕೊಟ್ಟಿದ್ದಾರೆ. ಸಿದ್ದರಾಮಯ್ಯನವರೇ ನಮ್ಮ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಮುಂದಾಗುತ್ತಿದ್ದಾರೆ. ನೀವು ನಮ್ಮ ಜಿಲ್ಲೆಯವರೇ ಆಗಿದ್ದೀರಾ. ಕೇಂದ್ರ ಸರ್ಕಾರದ ತೀರ್ಮಾನಗಳಿಗೆ ನೀವು ಕೈ ಜೋಡಿಸಿ. ರೈತರಿಗೆ ರಾಜ್ಯ ಸರ್ಕಾರದಿಂದ ಬೆಂಬಲ ಬೆಲೆ ಕೊಡಿ. ನಮ್ಮ ರೈತರನ್ನ ಉಳಿಸಿಕೊಳ್ಳುವ ನೀವು ಮಾಡಿ. ಈ ಭಾಗದ ಕೈ ನಾಯಕರು ಈ ಬಗ್ಗೆ ಸಿಎಂ ಜೊತೆ ಮಾತನಾಡಲಿ ಎಂದರು.
ಶಾಸಕ ಜಿ.ಟಿ.ಹರೀಶ್ ಗೌಡ ಮಾತನಾಡಿ, ಮೈಸೂರು ಭಾಗದ 5 ತಾಲ್ಲೂಕುಗಳಲ್ಲಿ ತಂಬಾಕು ಬೆಳೆಯಲಾಗುತ್ತದೆ. ತಂಬಾಕಿಗೆ ಈಗ ಬೆಂಬಲ ಬೆಲೆ ಸಿಗುತ್ತಿಲ್ಲ. ಜನ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಗ್ಗೆ ಕೇಂದ್ರದ ಗಮನ ಸೆಳೆಯುವ ಕೆಲಸ ಮಾಡಿದ್ದೇವೆ. ಕಳೆದ ವರ್ಷ ಕೂಡ ಇದೆ ರೀತಿಯ ಸಮಸ್ಯೆ ಉಂಟಾಗಿತ್ತು. ಆ ವೇಳೆ ಸಂಸದ ಯದುವೀರ್, ಕೇಂದ್ರ ಸಚಿವ ಕುಮಾರಸ್ವಾಮಿಯವರು ಸಮಸ್ಯೆ ಬಗೆಹರಿಸಿದ್ದರು. ಈಗಲು ಸಮಸ್ಯೆ ಉಂಟಾಗಿದೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಐಟಿಸಿ ಕಂಪನಿ ಮೇಲೆ ಒತ್ತಡ ಹಾಕಬೇಕಿದೆ. ತಂಬಾಕು ಬೆಳೆ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ರೈತರಿಗೆ ಐಟಿಸಿ ಕಂಪನಿ ನೀಡುತ್ತಿರುವ ಬೆಲೆ ಸಾಕಾಗುತ್ತಿಲ್ಲ. ತಂಬಾಕಿಗೆ ಬೆಂಬಲ ಬೆಲೆ ಸಿಗದೆ ಹುಣಸೂರು ತಾಲ್ಲೂಕಿನ ಓರ್ವ ರೈತ ಆತ್ಮಹತ್ಯೆಗೆ ಮುಂದಾಗಿದ್ದರು. ಕೇಂದ್ರ ಸಚಿವರ ಸೂಚನೆ ಮೇರೆಗೆ ಸ್ವಲ್ಪ ಚೇತರಿಕೆ ಕಂಡಿದೆ. ಈಗಲೂ ನಾವು ಸೂಕ್ತ ಪರಿಹಾರದ ನಿರೀಕ್ಷೆಯಲ್ಲಿದ್ದೇವೆ ಎಂದರು.
ಕೃತಕ ಅಭಾವ ಸೃಷ್ಠಿಸುವವರ ವಿರುದ್ಧ ಕ್ರಮ ಆಗಲಿ: ದೇಶದಲ್ಲಿ ವಾಣಿಜ್ಯ ಸಿಲಿಂಡರ್ ಅಭಾವ ವಿಚಾರವಾಗಿ ಸಾ.ರಾ.ಮಹೇಶ್ ಪ್ರತಿಕ್ರಯಿಸಿ, ಇದು ಕೃತಕ ಅಭಾವದ ಸೃಷ್ಟಿಯಾಗಿದೆ. ದೇಶದಲ್ಲಿ ಯಾವುದೇ ರೀತಿಯ ಗ್ಯಾಸ್ ಸಮಸ್ಯೆ ಇಲ್ಲ. ಯಾವ ಯಾವ ರಾಜ್ಯದಲ್ಲಿ ಗ್ಯಾಸ್ ರೀ ಫಿಲ್ಲಿಂಗ್ ಮಾಡಲಾಗ್ತಿದೆ ಅನ್ನೋ ಮಾಹಿತಿ ಇದೆ. ಕೃತಕ ಅಭಾವದವನ್ನ ಆಯಾ ರಾಜ್ಯಗಳು ತಡೆಗಟ್ಟಬೇಕು.
ಕೃತಕ ಅಭಾವ ಉಂಟು ಮಾಡೋರ ವಿರುದ್ಧ ಕ್ರಮ ಆಗಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕ ಅಶ್ವಿನ್ ಕುಮಾರ್, ಜೆಡಿಎಸ್ ನಗರಾಧ್ಯಕ್ಷ ಎಸ್.ಬಿ.ಎಂ.ಮಂಜು ಇನ್ನಿತರರು ಉಪಸ್ಥಿತರಿದ್ದರು.






























