ಟ್ರೈಲರ್ ನಲ್ಲೆ ಸಸ್ಪೆನ್ಸ್-ಥ್ರಿಲ್ಲರ್ ಮಾಯಾವಿ ಮರ್ಮ

ಹಾಡುಗಳ ಬಿಡುಗಡೆ

ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರದ ‘ಮಾಯಾವಿ’ ಚಿತ್ರ ತೆರೆಗೆ ಬರಲು ಸಿದ್ದವಾಗುತ್ತಿದೆ. ಈಗಾಗಲೇ ‘ಮಾಯಾವಿ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರತಂಡ ಟ್ರೈಲರ್ ಮತ್ತು ಹಾಡುಗಳನ್ನು ಬಿಡುಗಡೆಗೊಳಿಸಿತು.‘ಮಾಯಾವಿ’ ಚಿತ್ರದ ಎರಡು ಹಾಡುಗಳಿಗೆ ಅಗಸ್ತ್ಯ ಸಂತೋಷ್ ಸಂಗೀತ ಸಂಯೋಜಿಸಿದ್ದು ವಿಜಯ ಪ್ರಕಾಶ್, ಮೇಘನಾ ಮತ್ತಿತರರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಚಿತ್ರದುರ್ಗ ಜಿಲ್ಲೆಯ ಮಾಜಿ ಸಂಸದ ಜನಾರ್ಧನ ಸ್ವಾಮಿ, ನಟರಾದ ಸುನಾಮಿ ಕಿಟ್ಟಿ, ಗಣೇಶರಾವ್ ಕೇಸರ್ಕರ್ ಮೊದಲಾದವರು ‘ಮಾಯಾವಿ’ಯ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಇನ್ನು ಚಿತ್ರದುರ್ಗ ಮೂಲದ ಯುವ ಪ್ರತಿಭೆ ರಘುರಾಮ್ ‘ಮಾಯಾವಿ’ ಚಿತ್ರದಲ್ಲಿ ನಾಯಕ ನಟನಾಗಿ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಇವರಿಗೆ ನಿಶ್ಚಿತಾ ಶೆಟ್ಟಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ಹಿರಿಯ ನಟ ಎಂ. ಕೆ. ಮಠ, ಸೂರ್ಯ ಪ್ರವೀಣ್, ಸುರೇಶ ಬಾಬು, ಅನುರಾಧಾ, ಶಿಲ್ಪಾ, ಖುಷಿ ಗೌಡ ಮತ್ತಿತರರು ‘ಮಾಯಾವಿ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಶ್ರೀದುರ್ಗಾ ಸೆಕ್ಯುರಿಟಿ ಸರ್ವೀಸಸ್’ ಬ್ಯಾನರಿನಲ್ಲಿ ಡಾ. ಮಹಂತೇಶ್ ಹೆಚ್. ನಿರ್ಮಿಸುತ್ತಿರುವ ‘ಮಾಯಾವಿ’ ಚಿತ್ರಕ್ಕೆ ಶಂಕರ್ ಜಿ. ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

‘ಮಾಯಾವಿ’ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಬಳಿಕ ಮಾತನಾಡಿದ ಚಿತ್ರದ ನಾಯಕ ನಟ ರಘುರಾಮ್, ಈ ಸಿನಿಮಾದಲ್ಲಿ ನನಗೆ ಎರಡು ಶೇಡ್ ಇರುವಂಥ ಪಾತ್ರವಿದೆ. ಇದೊಂದು ವಾಸ್ತವತೆಗೆ ಹತ್ತಿರವಾಗಿರುವಂಥ ಸಿನಿಮಾ. ಚಾಲೆಂಜಿಂಗ್ ಆಗಿರುವ ನನ್ನ ಪಾತ್ರ ಎಲ್ಲರಿಗೂ ಇಷ್ಟವಾಗಲಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.

‘ಮಾಯಾವಿ’ ಬಗ್ಗೆ ಮಾತನಾಡಿದ ನಿರ್ದೇಶಕ ಶಂಕರ್ ಜಿ. ‘ಇದೊಂದು ಸಸ್ಪೆನ್ಸ್-ಕ್ರೈಂ ಥ್ರಿಲ್ಲರ್ ಕಥಾಹಂದರದ ಸಿನಿಮಾ. ಸಿನಿಮಾದ ಕೊನೆಯಲ್ಲೊಂದು ಸಂದೇಶವಿದೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥ ಸಿನಿಮಾ ಮಾಡಿದ್ದೇವೆ. ಲವ್, ಸೆಂಟಿಮೆಂಟ್, ಆ್ಯಕ್ಷನ್ ಹೀಗೆ ಎಲ್ಲಾ ಥರದ ಎಲಿಮೆಂಟ್ಸ್ ಈ ಸಿನಿಮಾದಲ್ಲಿದೆ.
ಚಿತ್ರದುರ್ಗ, ಬೆಂಗಳೂರು, ಹೊಸಪೇಟೆ ಸುತ್ತಮುತ್ತ ಸಿನಿಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸೆನ್ಸಾರ್ ನಿಂದ ಸಿನಿಮಾಕ್ಕೆ ‘ಯು’ ಸರ್ಟಿಫಿಕೇಟ್ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.ಚಿತ್ರಕ್ಕೆ ಗುರುದತ್ತ ಮುಸುರಿ ಛಾಯಾಗ್ರಹಣ, ಅನಿಲ್ ಕುಮಾರ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.