
ತಂತ್ರಜ್ಞಾನ, ಯುವ ಮನಸ್ಸು ಮತ್ತು ಮಹಿಳಾ ಶಕ್ತಿಯ ಕಥೆ
ಸ್ಮಾರ್ಟ್‌ಫೋನ್‌ಗಳ ಬೆಳಕಿನಲ್ಲಿ ಬೆಳೆದ, ಸ್ಕ್ರೋಲ್ ಮಾಡುವ ಬೆರಳುಗಳ ನಡುವೆ ಕನಸು ಕಟ್ಟುವ, ಕ್ಲಿಕ್ ಒಂದರಲ್ಲೇ ಜಗತ್ತನ್ನು ಕೈಯಲ್ಲಿ ಹಿಡಿದಿಟ್ಟುಕೊಂಡಿರುವ ‘ಜೆನ್?ಝೀ’ ತಲೆಮಾರಿನ ಕಥೆಗಳು ಇಂದಿನ ಸಿನಿಮಾಗಳಿಗೆ ಹೊಸ ವಿಷಯವಾಗುತ್ತಿವೆ. ಆದರೆ ಆ ತಲೆಮಾರನ್ನು ಕೇವಲ ಟ್ರೆಂಡ್ ಆಗಿ ನೋಡುವ ಬದಲು, ಅವರ ಮನಸ್ಥಿತಿ, ಚಿಂತನೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಪ್ರಶ್ನಿಸುವ ಪ್ರಯತ್ನಗಳು ಕಡಿಮೆ. ಆ ಖಾಲಿತನವನ್ನು ತುಂಬುವ ಉದ್ದೇಶದೊಂದಿಗೆ ತೆರೆಗೆ ಬರಲು ಸಜ್ಜಾಗಿದೆ ‘ಇಂದಿರಾ (ಜೆನ್-ಝೀ) ಸಿನೆಮಾ.
ಈ ಹಿಂದೆ ‘ರಾವೆನ್’ ಚಿತ್ರದ ಮೂಲಕ ಗಮನ ಸೆಳೆದ ಯುವ ನಿರ್ದೇಶಕ ವೇದ್, ‘ಇಂದಿರಾ’ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ನಿರ್ದೇಶನದ ಹೊಣೆ ಹೊತ್ತಿದ್ದಾರೆ. ‘ಜೆನ್?ಝೀ’ ತಲೆಮಾರಿನ ಚಿಂತನೆಗೆ ಹತ್ತಿರದಿಂದ ಪರಿಚಿತನಾಗಿರುವ ವೇದ್, ಈ ಚಿತ್ರವನ್ನು ಉಪನ್ಯಾಸದ ಶೈಲಿಯಲ್ಲಿ ಅಲ್ಲ, ಕಥನಾತ್ಮಕ ಹಾಗೂ ಮನರಂಜನೆಯ ಮೂಲಕ ಹೇಳಲು ಮುಂದಾಗಿದ್ದಾರೆ.“ಇದು ಇಂದಿನ ತಲೆಮಾರಿನ ಯುವಜನತೆಗೆ ನೇರವಾಗಿ ಕನೆಕ್ಟ್ ಆಗುವ ಸಿನಿಮಾ. ಅವರ ಯೋಚನೆಗಳು, ಅವರಿಂದ ಸಾಧ್ಯವಾಗುವ ಬದಲಾವಣೆಗಳೇ ಚಿತ್ರದ ಹೃದಯ,” ಎನ್ನುತ್ತಾರೆ ವೇದ್.
‘ಇಂದಿರಾ’ ಚಿತ್ರವನ್ನು ಕಿರಣ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ಕಿರಣ್ ಕುಮಾರ್ ಎಂ. ನಿರ್ಮಿಸುತ್ತಿದ್ದಾರೆ. “ಇಂದಿನ ಯುವಜನತೆಗೆ ಕನೆಕ್ಟ್ ಆಗುವ ಕಥೆಗೆ, ಅತ್ಯಾಧುನಿಕ ತಂತ್ರಜ್ಞಾನ ಅಗತ್ಯ. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ನೀಡುತ್ತಿದ್ದೇವೆ,” ಎನ್ನುತ್ತಾರೆ ನಿರ್ಮಾಪಕರು.
ಇತ್ತೀಚೆಗೆ ಬಿಡುಗಡೆಯಾದ ‘ಇಂದಿರಾ’ ಚಿತ್ರದ ಟೈಟಲ್ ಪೋಸ್ಟರ್ ಮತ್ತು ಟೀಸರ್, ಚಿತ್ರದ ಥೀಮ್ ಬಗ್ಗೆ ಮೊದಲ ಸುಳಿವು ನೀಡಿದೆ. ಇದು ಕೇವಲ ಯುವಕರನ್ನು ಗುರಿಯಾಗಿಸಿಕೊಂಡ ಸಿನಿಮಾ ಅಲ್ಲ; ಸಮಾಜವನ್ನೇ ಪ್ರಶ್ನಿಸುವ ಪ್ರಯತ್ನ ಎಂಬ ಸೂಚನೆ ಟೀಸರ್‌ನಲ್ಲಿ ಸ್ಪಷ್ಟವಾಗಿದೆ.
ಚಿತ್ರಕ್ಕೆ ರವಿವರ್ಮ ಅವರ ಛಾಯಾಗ್ರಹಣ ಮತ್ತು ಧನುಶ್ ಅವರ ಸಂಕಲನ ಇದೆ. ಬೆಂಗಳೂರು, ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳು ಮತ್ತು ಹೊರರಾಜ್ಯಗಳಲ್ಲೂ ಚಿತ್ರೀಕರಣ ನಡೆಯಲಿದೆ. ಡಿಜಿಟಲ್ ಯುಗದ ಕಥೆಗೆ ತಕ್ಕಂತೆ ದೃಶ್ಯಭಾಷೆಯೂ ಸಮಕಾಲೀನವಾಗಿರಲಿದೆ ಎಂಬ ಭರವಸೆ ತಂಡ ನೀಡುತ್ತಿದೆ.
ಚಿತ್ರದ ಮಹಿಳಾ ಪ್ರಧಾನ ಪಾತ್ರಕ್ಕೆ ಕನ್ನಡದ ಜನಪ್ರಿಯ ನಟಿಯೊಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಉಳಿದ ಪಾತ್ರಗಳಿಗೆ ದಕ್ಷಿಣ ಭಾರತದ ಕಲಾವಿದರನ್ನು ಸೇರಿಸಿಕೊಳ್ಳುವ ಯೋಚನೆಯಿದ್ದು, ಮಾರ್ಚ್ ಅಂತ್ಯದೊಳಗೆ ಸಂಪೂರ್ಣ ತಾರಾಬಳಗ ಘೋಷಣೆಯಾಗಲಿದೆ.
























