
ಬೆಂಗಳೂರು, ಮಾ. 16- ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮಾನ್ಯ ಅಧ್ಯಕ್ಷರಾದ ಎಸ್ .ಈ ಸುಧೀಂದ್ರ ಅವರು ಇಂದು ಕೆ.ಎಚ್ ಪಾಟೀಲ್ ಮೆಮೋರಿಯಲ್ ಟ್ರಸ್ಟ್ ಹಾಗೂ ಕೆ ಎಚ್ ಪಾಟೀಲ್ ಕಾನೂನು ಶಾಲೆ ವತಿಯಿಂದ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಸಹಕಾರ ಭೀಷ್ಮ,ಹಿರಿಯ ಕಾಂಗ್ರೆಸ್ ನಾಯಕ,ಹುಲಿಕೋಟೆ ಹುಲಿ ಎಂದೇ ನಾಮಾಂಕಿತರಾಗಿದ್ದ ಕೆ ಎಚ್ ಪಾಟೀಲ್ ಅವರ101ನೇ ಜಯಂತೋತ್ಸವವನ್ನು ವಿಧಾನ ಪರಿಷತ್ ಸದಸ್ಯರಾದ ಯು ಬಿ ವೆಂಕಟೇಶ್ ಅವರೊಂದಿಗೆ ಉದ್ಘಾಟಿಸಿ ಈ ಸಂದರ್ಭದಲ್ಲಿ ‘ಕರ್ನಾಟಕದ ಅರಣ್ಯ ಸಂರಕ್ಷಣೆಯಲ್ಲಿ ಶ್ರೀ.ಕೆ.ಎಚ್ ಪಾಟೀಲ್ ಅವರ ಪಾತ್ರ” ಕುರಿತ ವಿಚಾರ ಸಂಕಿರಣಕ್ಕೂ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಂಡಳಿಯ ಅಧ್ಯಕ್ಷರು ಮಾತನಾಡುತ್ತಾ ಕೆ ಎಚ್ ಪಾಟೀಲ್ ಅವರು ನಡೆದು ಬಂದ ದಾರಿ, ಕೈಗೊಂಡ ಸಹಕಾರ ಕ್ಷೇತ್ರದಲ್ಲಿನ ಮಹತ್ವದ ಕಾರ್ಯಗಳು, ರೈತ ಹೋರಾಟಗಳು, ಸಹಕಾರ ತತ್ವದಲ್ಲಿನ ನಂಬಿಕೆಗಳು, ಮಹತ್ವಕಾಂಕ್ಷಿ ಯೋಜನೆಗಳು, ಮೌಲ್ಯಧಾರಿತ ರಾಜಕಾರಣ, ಸಾಧಿಸಬೇಕೆಂಬ ಛಲ, ಸಾಹಸ ಪ್ರವೃತ್ತಿ, ಸ್ಥಾಪಿಸಿದ ಕೈಗಾರಿಕೆಗಳು, ಅವರ ದೂರ ದೃಷ್ಟಿ ಚಿಂತನೆಗಳ ಕುರಿತು ವಿಶ್ಲೇಷಿಸಿದರು.ಕಳೆದ ವರ್ಷ ಶ್ರೀ ಕೆ ಎಚ್ ಪಾಟೀಲ್ ಅವರ 100ನೇ ಜಯಂತೋತ್ಸವವನ್ನು ವಿಧಾನಸೌಧದಲ್ಲಿ ಕೆ ಎಚ್ ಪಾಟೀಲ್ ಸ್ಕೂಲ್ ಆಫ್ ಲಾ ಉದ್ಘಾಟನೆಯೊಂದಿಗೆ ಆಚರಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಕೆ ಎಚ್ ಪಾಟೀಲ್ ಅವರು ಅಂದು ಬ್ಯಾಂಕಿನಲ್ಲಿ ಕಾರಕೂನರಾಗಿ ವೃತ್ತಿಜೀವನ ಆರಂಭಿಸಿ, ಅದೇ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ 22ಕ್ಕೂ ಹೆಚ್ಚಿನ ಶಾಖೆಗಳನ್ನು ರಾಜ್ಯಾದ್ಯಂತ ಆರಂಭಿಸಲು ಕಾರಣಭೂತರಾಗಿದ್ದು ಇತಿಹಾಸ ಎಂದರು. 1950ರಲ್ಲಿ ಸಹಕಾರಿ ಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಜೀವನ ಆರಂಭ ಆರಂಭಿಸಿ 1954 ರಲ್ಲಿ ಎಐಸಿಸಿ ಅಧಿವೇಶನದಲ್ಲಿ ಭಾಗವಹಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಿ 1967 ರಲ್ಲಿ ಗದಗ ಮತ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ, 1972 ರಲ್ಲಿ ಶ್ರೀ ದೇವರಾಜ ಅರಸು ಅವರ ಸಚಿವ ಸಂಪುಟದಲ್ಲಿ ಮಾನ್ಯ ಕೃಷಿ ಮತ್ತು ಅರಣ್ಯ ಇಲಾಖೆಯ ಸಚಿವರಾಗಿ 1974-1979 ಹಾಗೂ1983-1985 ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದನ್ನು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಮನೋಜ್ ಕುಮಾರ್ ಐ.ಎಫ್.ಎಸ್, ಅರಣ್ಯ, ಜೀವಿಶಾಸ್ತ್ರ ಹಾಗೂ ಪರಿಸರ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರು ಫೆÇ್ರ.ಎಸ್.ಜಿ ಸಿದ್ದರಾಮಯ್ಯ, ಡಾ. ಸಿ ಎಸ್ ಪಾಟೀಲ್ ನಿರ್ದೇಶಕರು, ಕೆ ಐಎಲ್ ಪಿಎ ಆರ್ , ಡಾಕ್ಟರ್ ಎಸ್ ವಿ ನಾಡಗೌಡರ್, ಹಂಗಾಮಿ ಪಂಚಾಯತ್ ರಾಜ್ ವಿಶ್ವವಿದ್ಯಾಲಯ, ಗದಗ, ಬಸವರಾಜ್, ಸಹಾಯಕ ಕುಲ ಸಚಿವರು, ಕೆ ಎಸ್ ಎಲ್ ಯು, ಹುಬ್ಬಳ್ಳಿ ಅವರುಗಳು ಭಾಗವಹಿಸಿದ್ದರು. .





























