ಕೆನಡಾವನ್ನು ಚೀನಾ ನುಂಗಲಿದೆ: ಟ್ರಂಪ್

ವಾಷಿಂಗ್ಟನ್,ಜ.24:– ಗ್ರೀನ್‍ಲ್ಯಾಂಡ್‍ನ ಗೋಲ್ಡನ್ ಡೋಮ್ ವಿಚಾರದಲ್ಲಿ ಕೆನಡಾ ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿ ಕೆನಡಾವನ್ನು ಗುರಿಯಾಗಿಸಿಕೊಂಡು ಅವರು, “ಕೆನಡಾ ಅಮೆರಿಕ ಬೆಂಬಲಿತ ಭದ್ರತಾ ಯೋಜನೆಗಳಿಂದ ದೂರವಿದ್ದು ಚೀನಾಕ್ಕೆ ಹತ್ತಿರವಾದರೆ, ಚೀನಾ ಒಂದು ವರ್ಷದೊಳಗೆ ಅದನ್ನು ನುಂಗುತ್ತದೆ” ಎಂದು ಹೇಳಿದ್ದಾರೆ. ಟ್ರಂಪ್ ಅವರ ಪ್ರಸ್ತಾವಿತ ಗೋಲ್ಡನ್ ಡೋಮ್ ಕ್ಷಿಪಣಿ ರಕ್ಷಣಾ ಯೋಜನೆಯನ್ನು ಕೆನಡಾ ವಿರೋಧಿಸಿದ ನಂತರ ಟ್ರಂಪ್ ಅವರ ಹೇಳಿಕೆ ಬಂದಿದೆ.


ಮೊದಲ ವರ್ಷದೊಳಗೆ ಚೀನಾ ಕೆನಡಾವನ್ನು ನಾಶಪಡಿಸುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್ ಯಾವುದೇ ಬೆಲೆ ತೆತ್ತಾದರೂ ಗ್ರೀನ್‍ಲ್ಯಾಂಡ್ ಸ್ವಾಧೀನಪಡಿಸಿಕೊಳ್ಳಲು ಹೋರಾಟ ನಡೆಸಿದ್ದಾರೆ. ಟ್ರಂಪ್ ಇದರೊಂದಿಗೆ ತಮ್ಮ ಮಿತ್ರರಾಷ್ಟ್ರಗಳನ್ನು ಕೆರಳಿಸಿದ್ದಾರೆ. ಗ್ರೀನ್‍ಲ್ಯಾಂಡ್ ಕುರಿತು ಟ್ರಂಪ್ ಮತ್ತು ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ ನಡುವಿನ ಉದ್ವಿಗ್ನತೆ ಉತ್ತುಂಗಕ್ಕೇರಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ ಗ್ರೀನ್‍ಲ್ಯಾಂಡ್‍ನಲ್ಲಿ ಗೋಲ್ಡನ್ ಡೋಮ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸ್ಥಾಪಿಸಲು ಯೋಜಿಸಿದ್ದಾರೆ, ಆದರೆ ಇದನ್ನು ಕೆನಡಾ ಮತ್ತು ಇತರ ಯುರೋಪಿಯನ್ ರಾಷ್ಟ್ರಗಳು ವಿರೋಧಿಸಿವೆ. ಅಮೆರಿಕದ ವ್ಯವಸ್ಥೆಯ ಬದಲು ಚೀನಾದೊಂದಿಗೆ ತನ್ನ ಆರ್ಥಿಕ ಸಂಬಂಧಗಳನ್ನು ವಿಸ್ತರಿಸಿದರೆ, ಬೀಜಿಂಗ್ ಒಂದು ವರ್ಷದೊಳಗೆ ಅದನ್ನು ನುಂಗಬಹುದು ಎಂದು ಟ್ರಂಪ್ ಕೆನಡಾಕ್ಕೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಮತ್ತು ಕೆನಡಾದಲ್ಲಿ ಉದ್ವಿಗ್ನತೆ


ಅಮೆರಿಕ ಮತ್ತು ಕೆನಡಾ ನಡುವಿನ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಕಂಡುಬರುತ್ತಿರುವ ಸಮಯದಲ್ಲಿ ಈ ಹೇಳಿಕೆ ಬಂದಿದೆ. ಇತ್ತೀಚೆಗೆ, ವಿಶ್ವ ಆರ್ಥಿಕ ವೇದಿಕೆಯಲ್ಲಿ, ಕೆನಡಾದ ಪ್ರಧಾನಿ ಮಾರ್ಕ್ ಕಾರ್ನಿ, ಜಾಗತಿಕ ರಾಜಕೀಯದ ಕುರಿತು ಮಾತನಾಡುತ್ತಾ, ಜಗತ್ತು ಪ್ರಮುಖ ರಾಷ್ಟ್ರಗಳ ನಡುವಿನ ಸ್ಪರ್ಧೆಯ ಯುಗವನ್ನು ಪ್ರವೇಶಿಸಿದೆ ಮತ್ತು ನಿಯಮ ಆಧಾರಿತ ವ್ಯವಸ್ಥೆಯು ದುರ್ಬಲಗೊಳ್ಳುತ್ತಿದೆ ಎಂದು ಹೇಳಿದ್ದಾರೆ. ಅವರು ಅಮೆರಿಕದ ಸುಂಕ ನೀತಿಗಳು ಮತ್ತು ಒತ್ತಡ ತಂತ್ರಗಳನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.