ಕುಖ್ಯಾತ ಕನ್ನಗಳ್ಳರಿಬ್ಬರ ಬಂಧನ೭೨ ಲಕ್ಷ ಮೌಲ್ಯದ ಚಿನ್ನ ಬೆಳ್ಳಿ ಜಪ್ತಿ

ನಗರದ ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಬೇಗೂರು ಪೊಲೀಸ್ ಠಾಣೆ ಪೊಲೀಸರು ಖದೀಮರಿಂದ ವಶಪಡಿಸಿಕೊಂಡಿರುವ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನಾಭರಣಗಳನ್ನು ನಗರ ಲೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ರವರು ಪರಿಶೀಲನೆ ನಡೆಸಿದರು. ಡಿಸಿಪಿ ನಾರಾಯಣ್ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದಾರೆ.

ಬೆಂಗಳೂರು,ಅ.೨೯-ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕನ್ನಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಕನ್ನಗಳ್ಳರನ್ನು ಬಂಧಿಸಿರುವ ಬೇಗೂರು ಪೊಲೀಸರು ೭೨ ಲಕ್ಷ ಮೌಲ್ಯದ ೬೧೪ ಗ್ರಾಂ ಚಿನ್ನಾಭರಣ ಹಾಗೂ ೪೭೦ ಗ್ರಾಂ ಬೆಳ್ಳಿಯ ವಸ್ತುಗಳ ವಶಪಡಿಸಿಕೊಂಡಿದ್ದಾರೆ.


ಕೆಜಿಎಫ್ ನ ಕುಪ್ಪಂ ರಸ್ತೆಯ ಶಾಂತಕುಮಾರ(೩೭) ಸುಸೈಪಾಳ್ಯಂ, ಆಂಡರ್ಸನ್‌ಪೇಟೆಯ ಜ್ಞಾನಪ್ರಕಾಶಮ್ ಅಲಿಯಾಸ್ ಅಜ್ಜು(೪೦) ಬಂಧಿತ ಆರೋಪಿಗಳಾಗಿದ್ದಾರೆ.ಇವರಲ್ಲಿ ಶಾಂತಕುಮಾರ ಪೇಂಟರ್ ಆಗಿದ್ದರೆ,ಅಜ್ಜು ಮರಗೆಲಸ ಮಾಡುತ್ತಿದ್ದು,ಇವರಿಬ್ಬರು ಹಳಡ ಕಳ್ಳರಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.ಬೇಗೂರಿನ ವಿಶ್ವಪ್ರಿಯ ಲೇಔಟ್‌ನ ಮುಕ್ತಾ ಎಂ ಶೆಟ್ಟರ್ ಅವರು ಕುಟುಂಬ ಸಮೇತ ಕಳೆದ ಜೂ.೧೬ರಂದು ರಾತ್ರಿ ಮನೆಗೆ ಬೀಗ ಹಾಕಿಕೊಂಡು, ಉಡುಪಿಗೆ ಹೋಗಿ ಜೂ..೧೮ ರಂದು ಬೆಳಿಗ್ಗೆ ವಾಪಸ್ಸು ಬಂದು ನೋಡಿದಾಗ ಮುಂಬಾಗಿಲ ಬೀಗ ಒಡೆದು ಒಳನುಗ್ಗಿ ಕನ್ನಗಳವು ಮಾಡಲಾಗಿತ್ತು.

ಈ ಸಂಬಂಧ ಪ್ರಕರಣ ದಾಖಲಿಸಿ ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಕೈಗೊಂಡು ಖಚಿತ ಮಾಹಿತಿ ಕಲೆಹಾಕಿ ಬೇಗೂರು ಕೆರೆ ಕೋಡಿ ಹತ್ತಿರ ಓರ್ವ ಬಂಧಿಸಿ ವಿಚಾರಣೆ ನಡೆಸಿದಾಗ ಸಹಚರನೊಂದಿಗೆ ಸೇರಿ ಮನೆ ಕನ್ನ ಕಳವು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿರುತ್ತಾನೆ. ಹಾಗೂ ಬೇಗೂರಿನ ಪೊಲೀಸ್ ಠಾಣಾ ಸರಹದ್ದಿನಲ್ಲಿ ಈ ಹಿಂದೆ ೦೨ ಮನೆ ಕನ್ನ ಕಳವು ಮಾಡಿರುವುದಾಗಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೂ ಸಹ ಮನೆ ಕನ್ನ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ.


ಆರೋಪಿಯನ್ನು ಸುದೀರ್ಘ ವಿಚಾರಣೆ ನಡೆಸಿ ಪ್ರಕರಣದಲ್ಲಿ ಕಳವು ಮಾಡಿರುವ ಚಿನ್ನಾಭರಣಗಳನ್ನು ಕೆಜಿಎಫ್ ನ ೩ ಗಿರವಿ ಅಂಗಡಿಗಳಲ್ಲಿ ಅಡಮಾನ ಇಟ್ಟಿರುವುದು ಹಾಗೂ ಸಹಚರನ ಬಗ್ಗೆ ಸಹ ಮಾಹಿತಿಯನ್ನು ನೀಡಿದ್ದನು.ಗಿರವಿ ಅಂಗಡಿಗಳಲ್ಲಿನ ಅಡವಿಟ್ಟ ಚಿನ್ನಾಭರಣಗಳನ್ನು ಜಪ್ತಿ ಮಾಡಿ ಕಳೆದ ಅ.೧೪ ರಂದು ಪ್ರಕರಣದಲ್ಲಿ ಭಾಗಿಯಾಗಿದ್ದ ಸಹಚರನನ್ನು ಬೇಗೂರಿನ ಮುನೇಶ್ವರ ಲೇಔಟ್ ಬಳಿ ಬಂಧಿಸಲಾಗಿದೆ.


ಆರೋಪಿಗಳಿಬ್ಬರು ನೀಡಿದ ಮಾಹಿತಿಯ ಮೇರೆಗೆ ಚಿಂತಾಮಣಿ ತಾಲ್ಲೂಕಿನ ೩ ಜ್ಯೂವೆಲರಿ ಅಂಗಡಿಗಳು ಹಾಗೂ ಕೆ.ಜಿ.ಎಫ್‌ನ ೩ ಜ್ಯೂವೆಲರಿ ಅಂಗಡಿಗಳಲ್ಲಿ ಅಡವಿಟ್ಟ ೩೮೧ ಗ್ರಾಂ ಚಿನ್ನದ ವಡವೆಗಳನ್ನು ಹಾಗೂ ೪೭೦ ಗ್ರಾಂ ತೂಕದ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಬೇಗೂರು ೩ ಹೊಸಕೋಟೆ, ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯ ತಲಾ ೧ ಸೇರಿ ೫ ಮನೆಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಹೇಳಿದರು.

ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ನಾರಾಯಣ್ ಮಾರ್ಗದರ್ಶನದಲ್ಲಿ ಬೇಗೂರು ಪೊಲೀಸ್ ಇನ್ಸ್ ಪೆಕ್ಟರ್ ಕೃಷ್ಣಕುಮಾರ್ ಮತ್ತವರ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.