Home ಜಿಲ್ಲೆ ಮೈಸೂರು ಕಬಿನಿ ನಾಲೆಯ ಕೆರೆ ಕಟ್ಟೆಗೆ ನೀರು ಬಿಡುವಂತೆ ಆಗ್ರಹಿಸಿ ಪ್ರತಿಭಟನೆ

ಕಬಿನಿ ನಾಲೆಯ ಕೆರೆ ಕಟ್ಟೆಗೆ ನೀರು ಬಿಡುವಂತೆ ಆಗ್ರಹಿಸಿ ಪ್ರತಿಭಟನೆ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.12:-
ಕಬಿನಿ ನಾಲೆ, ಕೆರೆ ಕಟ್ಟೆಗಳಿಗೆ ನೀರು ಬಿಡಲು ಒತ್ತಾಯಿಸಿ ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ಮುಖಂಡರು ಬುಧವಾರ ಕಾಡಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಗನ್ ಹೌಸ್ ವೃತ್ತದ ಬಳಿಯ ಕುವೆಂಪು ಉದ್ಯಾನದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗುತ್ತಾ ಕಾಡಾ ಕಚೇರಿಗೆ ತೆರಳಿ ಮುತ್ತಿಗೆ ಹಾಕಲು ಯತ್ನಿಸಿದರು. ಅವರನ್ನು ಪೆÇಲೀಸರು ತಡೆದರು.


ಈ ವೇಳೆ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ವ್ಯಾಪ್ತಿಯ ಕಬಿನಿ ವ್ಯಾಪ್ತಿಯ ನಾಲೆಗಳಿಗೆ ಹಾಗೂ ಹುಲ್ಲಳ್ಳಿ, ರಾಂಪುರ ನಾಳೆಗಳಿಗೆ ನೀರು ಬಿಡುವಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಮುಖ್ಯಮಂತ್ರಿಗಳ ಹಿಂಬಾಲಕರಾಗಿ ತಿರುಗಾಡಲು ಪ್ರಾರಂಭಿಸಿದ್ದು, ಜಿಲ್ಲೆಯ ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.


ಕಬಿನಿ ನಾಲೆ ದುರಸ್ತಿ ಹಾಗೂ ಅದರ ವ್ಯಾಪ್ತಿಯಲ್ಲಿ ಬರುವ ಕಾಮಗಾರಿಗಳ ಗುಣಮಟ್ಟವನ್ನು ಅಧಿಕಾರಿಗಳು ಕಾಪಾಡಬೇಕು ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ನೀರಾವರಿ ಸಲಹಾ ಸಮಿತಿ ಸಭೆ ಮಾಡಿ ಕೆರೆ, ಕಟ್ಟೆಗಳಿಗೆ ಮತ್ತು ನಾಲೆಗಳಿಗೆ ನೀರು ಬಿಡಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಫೆ. 15ರಿಂದ ನಾಲೆ ಹಾಗೂ ಕೆರೆಕಟ್ಟೆಗೆ ನೀರು ಹರಿಸುತ್ತೇವೆ ಎಂದು ಲಿಖಿತ ಭರವಸೆ ನೀಡಿದ ಬಳಿಕ ಪ್ರತಿಭಟನೆ ವಾಪಸ್ ಪಡೆಯಲಾಯಿತು.


ಪ್ರತಿಭಟನೆಯಲ್ಲಿ ಕೆರೆಹುಂಡಿ ರಾಜಣ್ಣ, ಜಿಲ್ಲಾಧ್ಯಕ್ಷ ವಳಗೆರೆ ಗಣೇಶ್, ಹೆಚ್.ಗುಂಡ್ಲ ಚಿದಂಬರ, ಗಣೇಶ್, ಮುದ್ದಹಳ್ಳಿ ಮಧು, ಸುಜ್ಜಲೂರು ಜಯಸ್ವಾಮಿ, ಬಿದರಳ್ಳಿ ಮಾದಪ್ಪ, ದೇವಿರಮ್ಮನಹಳ್ಳಿ ಸಿದ್ದಬಸಪ್ಪ, ಶ್ರೀಕಂಠ ಸ್ವಾಮಿ, ದೇವಿರಮ್ಮನಹಳ್ಳಿ ಹುಂಡಿ ನವೀನ್, ಶ್ಯಾನಾಡ್ರಹಳ್ಳಿ ಬಸವರಾಜು, ನಾಗರಾಜಪ್ಪ ಅಂಡುವಿನಹಳ್ಳಿ, ಮಹೇಶ್ ಕುರಹಟ್ಟಿ, ರಾಜೇಶ್, ಪುನೀತ್, ಕಸುವಿನಹಳ್ಳಿ ಗುರು, ಮೊಳಕುಂಡಿ ಸೋಮ, ಮಾದಾಪುರ ಪುನೀತ್ ಪಾಲ್ಗೊಂಡಿದ್ದರು.