ಎಲ್ಲ ಮಾದರಿಯ ಕ್ರಿಕೆಟ್‌ಗೆ ಚೇತೇಶ್ವರ ಪೂಜಾರ ವಿದಾಯ


ನವದೆಹಲಿ,ಆ.೨೪:ಟೆಸ್ಟ್ ಕ್ರಿಕೆಟಿಗ ಬ್ಯಾಟರ್ ಚೇತೇಶ್ವರ ಪೂಜಾರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತದ ಜಿರ್ಸಿ ಧರಿಸುವುದು, ರಾಷ್ಟ್ರಗೀತೆ ಹಾಡುವುದು, ಪ್ರತಿಬಾರಿ ಮೈದಾನಕ್ಕೆ ಕಾಲಿಟ್ಟಾಗಲು ಸಾಧ್ಯವಾದಷ್ಟು ಪ್ರಯತ್ನ ಮಾಡುವ ಸಂದರ್ಭದಲ್ಲಿ ಉಂಟಾಗುವ ಭಾವನೆಗಳನ್ನು ಪದಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ ಎಂದಿದ್ದಾರೆ.
ಎಲ್ಲದಕ್ಕೂ ಕೊನೆ ಇರುತ್ತದೆ. ಅಪಾರ ಕೃತಜ್ಞತೆಗಳೊಂದಿಗೆ ಭಾರತೀಯ ಕ್ರಿಕೆಟ್‌ನ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ತೀರ್ಮಾನಿಸಿದ್ದೇನೆ ಎಂದು ಹೇಳಿರುವರು.
ವೃತ್ತಿ ಜೀವನದುದ್ದಕ್ಕೂ ತಮಗೆ ಬೆಂಬಲ ನೀಡಿ ಪ್ರೀತಿ ತೋರಿದ ಎಲ್ಲರಿಗೂ ಪೂಜಾರ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ರಾಜ್‌ಕೋಟ್‌ನಲ್ಲಿ ಜನಿಸಿದ ೩೭ ವರ್ಷದ ಪೂಜಾರ ೨೦೧೦ರಲ್ಲಿ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದರು.
ಭಾರತ ತಂಡದಲ್ಲಿ ಅತೀ ಹೆಚ್ಚು ರನ್ ಗಳಿಸಿದ ೮ನೇ ಟೆಸ್ಟ್ ಬ್ಯಾಟರ್ ಎಂಬ ಕೀರ್ತಿಗೆ ಭಾಜನರಾಗಿರುವ ಅವರು, ಇದುವರೆಗೆ ೧೦೩ ಟೆಸ್ಟ್ ಹಾಗೂ ೫ ಏಕದಿನ ಪಂದ್ಯಗಳನ್ನಾಡಿದ್ದಾರೆ.
೧೦೩ ಟೆಸ್ಟ್ ಪಂದ್ಯಗಳಲ್ಲಿ ೪೩.೬೦ ಸರಾಸರಿಯಲ್ಲಿ ೧೯ ಶತಕಗಳು ಮತ್ತು ೩೫ ಅರ್ಧ ಶತಕಗಳೂ ಸೇರಿದಂತೆ ೭,೧೯೫ ರನ್ ಬಾರಿಸಿದ್ದಾರೆ.
ತವರಿನಲ್ಲಿ ನಡೆದ ಒಟ್ಟು ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ೩,೮೩೯ ರನ್ ಗಳಿಸಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ವಿಶ್ವಾಸಾರ್ಹ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಸ್ವದೇಶ ಮತ್ತು ವಿದೇಶಗಳಲ್ಲಿ ಭಾರತದ ಗೆಲುವಿಗೆ ಪೂಜಾರ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗ ಪೂಜಾರ ಅವರು ಬ್ಯಾಟಿಂಗ್ ಲಯ ಕಳೆದುಕೊಂಡಿದ್ದರು. ಹೀಗಾಗಿ ಅವರು ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಏಕದಿನ ಪಂದ್ಯದಲ್ಲಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಕೇವಲ ೫ ಏಕದಿನ ಪಂದ್ಯಗಳನ್ನಾಡಿದ್ದಾರೆ.
ಪುಜಾರ ಕ್ರಿಕೆಟ್ ಜೀವನದ ೨೦ ವರ್ಷಗಳಲ್ಲಿ ೨೭೮ ಪ್ರಥಮ ದರ್ಜೆ ಪಂದ್ಯಗಳು, ೧೩೧ ಲಿಸ್ಟ್-ಎ ಮತ್ತು ೭೧ ಟಿ-೨೦ ಪಂದ್ಯಗಳನ್ನು ಆಡಿದ್ದಾರೆ. ಪ್ರಥಮ ದರ್ಜೆಯಲ್ಲಿ ೬೬ ಶತಕಗಳೊಂದಿಗೆ ೨೧,೩೦೧ ರನ್ ಗಳಿಸಿದ್ದಾರೆ.
ಲಿಸ್ಟ್-ಎ ನಲ್ಲಿ ೧೬ ಶತಕಗಳೊಂದಿಗೆ ೫,೭೫೯ ರನ್ ಗಳಿಸಿರುವ ಅವರು, ಟಿ-೨೦ ಮಾದರಿಯಲ್ಲಿ ೧ ಶತಕದ ಜತೆ ೧,೫೫೬ ರನ್ ಗಳಿಸಿದ್ದಾರೆ.