
ಉಪ್ಪಿನಂಗಡಿ: ಯಾವುದೇ ಪರವಾನಗಿ ಪಡೆಯದೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಅಕ್ರಮವಾಗಿ ಬ್ಯಾರೆಲ್ ಮತ್ತು ಕ್ಯಾನ್ಗಳಲ್ಲಿ ಶೇಖರಿಸಿಟ್ಟಿದ್ದ ಸುಮಾರು ೪,೧೭೫ ಲೀಟರ್ ಡೀಸೆಲ್ ಅನ್ನು ಪೊಲೀಸರು ಪತ್ತೆಹಚ್ಚಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಕಣಿಯೂರು ಗ್ರಾಮದ ಮುದಲ್ತಿಯಾರ್ ನಿವಾಸಿ ಜಗದೀಶ್ (೩೫) ಎಂಬಾತನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ರೋಹಿಣಿ ಸಿ.ಕೆ. ಅವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಮಾರ್ಚ್ ೯ರ ರಾತ್ರಿ ಕಣಿಯೂರು ಗ್ರಾಮದ ಮುದಲ್ತಿಯಾರ್ ಎಂಬಲ್ಲಿರುವ ಜಗದೀಶ್ ಎಂಬಾತನ ಮನೆಯ ಸಮೀಪದ ಶೆಡ್ ಮೇಲೆ ಉಪ್ಪಿನಂಗಡಿ ವೃತ್ತ ನಿರೀಕ್ಷಕರು ಹಾಗೂ ಠಾಣಾಧಿಕಾರಿಗಳ ತಂಡ ದಾಳಿ ನಡೆಸಿತು. ಈ ಸಂದರ್ಭದಲ್ಲಿ ಶೆಡ್ನಲ್ಲಿ ೨೦೦ ಲೀಟರ್ ಸಾಮರ್ಥ್ಯದ ೨೦ ಬ್ಯಾರೆಲ್ಗಳು ಹಾಗೂ ೩೫ ಲೀಟರ್ ಸಾಮರ್ಥ್ಯದ ೫ ಕ್ಯಾನ್ಗಳಲ್ಲಿ ತುಂಬಿಸಿಟ್ಟಿದ್ದ ಒಟ್ಟು ೪,೧೭೫ ಲೀಟರ್ ಡೀಸೆಲ್ ಪತ್ತೆಯಾಗಿದೆ. ಇದರೊಂದಿಗೆ ಸ್ಥಳದಲ್ಲಿದ್ದ ಖಾಲಿ ಬ್ಯಾರೆಲ್, ಕ್ಯಾನ್ ಹಾಗೂ ಇತರೆ ಪರಿಕರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಪ್ತಿ ಮಾಡಲಾದ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ ೩,೫೦,೦೦೦ ರೂಪಾಯಿ ಎಂದು ಅಂದಾಜಿಸಲಾಗಿದೆ.
ಆರೋಪಿ ಜಗದೀಶ್ ಈ ಇಂಧನವನ್ನು ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಅಪಾಯಕಾರಿ ರೀತಿಯಲ್ಲಿ ಸಂಗ್ರಹಿಸಿಟ್ಟಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.






























