ಇಸ್ರೇಲ್ ದಾಳಿ: ಗಾಜಾದಲ್ಲಿ ೩೩ ಮಂದಿ ಸಾವು

ಟೆಲ್ ಅವೀವಾ,ಅ.೨೯- ಹಮಾಸ್ ಬಂಡುಕೋರರು ಮತ್ತು ಇಸ್ರೇಲ್ ಸೇನೆಯ ನಡುವೆ ಕದನ ವಿರಾಮ ಜಾರಿಯಾಗಿದ್ದರೂ ಗಾಜಾದಲ್ಲಿ ಇಸ್ರೇಲ್ ಸೇನೆ ನಡೆಸಿದ ಸರಣಿ ವಾಯುದಾಳಿಯಲ್ಲಿ ಕನಿಷ್ಠ ೩೩ ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಹಮಾಸ್ ನಡೆಸುವ ನಾಗರಿಕ ರಕ್ಷಣಾ ಸಂಸ್ಥೆ ಮತ್ತು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಕದನ ವಿರಾಮ ಒಪ್ಪಂದದ ಉಲ್ಲಂಘನೆಯಾಗಿದ್ದು ಹಮಾಸ್ ಮತ್ತು ಇಸ್ರೇಲ್ ಸೇನೆಯ ನಡುವೆ ಬೂದಿಮುಚ್ಚಿದ ಕೆಂಡದಂತಿದ್ದು ಯಾವುದೇ ಕ್ಷಣದಲ್ಲಿ ಪ್ರತಿದಾಳಿ ನಡೆಯುವ ಸಾಧ್ಯತೆಗಳೂ ಇವೆ ಎನ್ನಲಾಗಿದೆ.ಗಾಜಾದಲ್ಲಿ ಹಮಾಸ್ ಬಂಡುಕೋರರ ಮೇಲೆ ಇಸ್ರೇಲ್ ಸೈನಿಕರು ಸರಣಿ ವಾಯುದಾಳಿ ನಡೆಸಿದ್ದಾರೆ. ಕದನ ವಿರಾಮ ಒಪ್ಪಂದ ಜಾರಿ ಮಾಡಿದರೂ ಒಪ್ಪಂದಂತೆ ಬಾಕಿ ಇರುವ ಒತ್ತೆಯಾಳುಗಳ ಬಗ್ಗೆ ಮಾಹಿತಿ ಅಥವಾ ಅವರ ಬಗ್ಗೆ ಸುಳಿವು ನೀಡದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಇಸ್ರೇಲ್ ಸೇನೆಯ ಮೂಲಗಳು ತಿಳಿಸಿವೆ.


ಕದನ ವಿರಾಮ ಜಾರಿಗೆ ಮುನ್ನ ಮಾಡಿಕೊಂಡ ಒಪ್ಪಂದವನ್ನು ಪಾಲಿಸುವಲ್ಲಿ ಹಮಾಸ್ ಬಂಡುಕೋರರು ವಿಫಲರಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಆರೋಪಿಸಿದ್ದಾರೆ. ಕದನ ವಿರಾಮಕ್ಕೆ “ಯಾವುದೂ” ಅಪಾಯ ತಂದೊಡ್ಡುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದು ಸೈನಿಕರನ್ನು ಗುರಿಯಾಗಿಸಿಕೊಂಡರೆ ಇಸ್ರೇಲ್ “ಪ್ರತಿದಾಳಿ ನಡೆಸಬೇಕು” ಎಂದು ಹೇಳಿದ್ದಾರೆ.


ಇಸ್ರೇಲಿ ದಾಳಿಗಳು ಗಾಜಾ ನಗರ, ಬೀಟ್ ಲಾಹಿಯಾ, ಅಲ್-ಬುರೈಜ್, ನುಸೈರತ್ ಮತ್ತು ಖಾನ್ ಯೂನಿಸ್‌ನಲ್ಲಿರುವ ಮನೆಗಳು, ಶಾಲೆಗಳು ಮತ್ತು ವಸತಿ ಪ್ರದೇಶಗಳ ಮೇಲೆ ದಾಳಿ ನಡೆದಿದ್ದು ಮತ್ತೊಂದು ಸುತ್ತಿನ ದಾಳಿ ಪ್ರತಿದಾಳಿ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ, “ನಿರಂತರ ಬಾಂಬ್ ದಾಳಿ ಮತ್ತು ಮೂಲಸೌಕರ್ಯಗಳ ಕೊರತೆಯಿಂದಾಗಿ ರಕ್ಷಣಾ ತಂಡಗಳು ಅತ್ಯಂತ ಕಠಿಣ ಪರಿಸ್ಥಿತಿಗಳ ನಡುವೆ ಕೆಲಸ ಮಾಡುತ್ತಿವೆ” ಎಂದು ಗಾಜಾದ ನಾಗರಿಕ ರಕ್ಷಣಾ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.


ಹಮಾಸ್ ಬಂಡುಕೋರರು ತಮ್ಮ ವಶದಲ್ಲಿ ಇಟ್ಟುಕೊಂಡಿರುವ ಅನೇಕ ಮಂದಿ ಮೃತಪಟ್ಟಿರುವ ಸಾಧ್ಯತೆ ಇದೆ, ಕೆಲವರು ಇನ್ನೂ ಅವಶೇಷಗಳ ಅಡಿಯಲ್ಲಿದ್ದಾರೆ, ಮತ್ತು ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗಿದೆ.ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹಮಾಸ್ ಬಂಡುಕೋರರ ವಿರುದ್ದ ದಾಳಿ ನಡೆಸುವಂತೆ ಆದೇಶಿಸಿದ್ದಾರೆ.