
ಸಂಜೆವಾಣಿ ನ್ಯೂಸ್
ಮೈಸೂರು: ಮಾ.16:- ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನ, ಬರಹ ಹಾಗೂ ವಿಚಾರಧಾರೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ, ಬೆಂಗಳೂರು ಆಶ್ರಯದಲ್ಲಿ ನಡೆಯಿತು. ವಿಶ್ವವಿದ್ಯಾಲಯದ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರಗಳ ಸಹಯೋಗದಲ್ಲಿ ಸರ್ಕಾರಿ ಮಹಾರಾಜ ಸಂಸ್ಕೃತ ಕಾಲೇಜು ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
“ಮಹಾನಾಯಕ, ಸಂವಿಧಾನ ಶಿಲ್ಪಿ, ಸಮಸಮಾಜ ನಿರ್ಮಾತೃ ಡಾ. ಬಿ.ಆರ್. ಅಂಬೇಡ್ಕರ್ ಅವರ ಬದುಕು, ಬರಹ ಹಾಗೂ ವಿಚಾರಧಾರೆಗಳು” ಎಂಬ ವಿಷಯದಡಿ ನಡೆದ ಕಾರ್ಯಕ್ರಮವನ್ನು ವಿದ್ವಾನ್ ಕೆ. ಶಿವರುದ್ರಯ್ಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಪಿ. ಸತ್ಯನಾರಾಯಣ ವಹಿಸಿದ್ದರು. ನಿವೃತ್ತ ಪ್ರಾಧ್ಯಾಪಕರಾಗಿದ್ದು ಖ್ಯಾತ ಸಂಸ್ಕೃತಿ ಹಾಗೂ ಆಧ್ಯಾತ್ಮಿಕ ತತ್ತ್ವ ಚಿಂತಕರಾದ ಪೆÇ್ರ. ಡಾ. ಶಿವರಾಜಪ್ಪ ಅವರು ಮುಖ್ಯ ಭಾಷಣ ಹಾಗೂ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದ ನೇತೃತ್ವ ನುಡಿಯನ್ನು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಸಾರಾಂಗ ಉಪನಿರ್ದೇಶಕರಾದ ಡಾ. ಬಿ. ಗೋವಿಂದ ನೀಡಿದರು. ಪ್ರಾಸ್ತಾವಿಕ ನುಡಿಯನ್ನು ಕಾಲೇಜಿನ ನವೀನ ನ್ಯಾಯ ವಿಭಾಗದ ವಿದ್ವಾಂಸರಾದ ಡಾ. ಎಂ.ಎ. ಆಳ್ವಾರ್ ಸಲ್ಲಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ವೇದಘೋಷ ಮಾಡಿದರು ಹಾಗೂ ಸಂಸ್ಕೃತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರಾರ್ಥನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಭಾರತ ಸಂವಿಧಾನದ ಪ್ರಮಾಣವಚನದ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಂದ ಸಾಮೂಹಿಕವಾಗಿ ಪಠಣ ಮಾಡಿಸಿದರು.
ಕಾರ್ಯಕ್ರಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಸಮಾಜ ನಿರ್ಮಾಣದ ಆದರ್ಶಗಳು, ಸಂವಿಧಾನಾತ್ಮಕ ಚಿಂತನೆಗಳು ಹಾಗೂ ಸಾಮಾಜಿಕ ನ್ಯಾಯದ ಸಂದೇಶಗಳು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದವು.
ಕಾರ್ಯಕ್ರಮವನ್ನು ಸಾಮವೇದ ವಿಭಾಗದ ಅತಿಥಿ ಉಪನ್ಯಾಸಕರಾದ ವಿದ್ವಾನ್ ಕುಮಾರಭಟ್ ಅವರು ನಿರೂಪಿಸಿದರು. ಕೊನೆಯಲ್ಲಿ ಪೂರ್ವಮೀಮಾಂಸಾ ವಿಭಾಗದ ಅತಿಥಿ ಉಪನ್ಯಾಸಕರಾದ ಡಾ. ಶಂಭುಲಿಂಗ ಉಪಾಧ್ಯಾಯ ವಂದನಾರ್ಪಣೆ ಸಲ್ಲಿಸಿದರು.






























