
ಸಂಜೆವಾಣಿ ನ್ಯೂಸ್
ಮೈಸೂರು: ಜೂ.13:- ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಸಾಂಸ್ಕೃತಿಕ ನಗರ ಮೈಸೂರನ್ನು ಸುಸಜ್ಜಿತವಾಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವಾಕಾಂಕ್ಷೆಯ ನವ ಮೈಸೂರು ನಿರ್ಮಾಣ ಯೋಜನೆ ಅನುಷ್ಠಾನಗೊಳಿಸಲು ಗಂಭೀರ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಈ ಸಂಬಂಧ ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ ಗುರುವಾರ ಉನ್ನತ ಮಟ್ಟದ ಸಭೆ ನಡೆಸಿ ಯೋಜನೆಯ ಬಗ್ಗೆ ಚರ್ಚೆ ನಡೆಸಿದರು. ಮೈಸೂರಿನ ಸುತ್ತಮುತ್ತಲಿನ ಪ್ರದೇಶಗಳನ್ನು ನಗರ ವ್ಯಾಪ್ತಿಗೆ ತಂದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಸಭೆಯ ಬಗ್ಗೆ ಮಾಹಿತಿ ನೀಡಿದ ಸಚಿವ ಬಿ.ಎಸ್.ಸುರೇಶ, ರಾಜಧಾನಿ ಬೆಂಗಳೂರಿನಂತೆಯೇ ಮೈಸೂರು ಸಹ ವೇಗವಾಗಿ ನಡೆಯುತ್ತಿರುವ ನಗರವಾಗಿದೆ. ಇಲ್ಲಿ ಐಟಿ, ಬಿಟಿ ಸೇರಿದಂತೆ ಕೈಗಾರಿಕೆಗಳು, ವಸತಿ ಯೋಜನೆಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ನಗರ ವಿಸ್ತರಣೆಯಾಗುತ್ತಿದ್ದು, ಇದಕ್ಕೆ ಪೂರಕವಾಗಿ ಸಮಗ್ರ ಯೋಜನೆಯನ್ನು ಸಿದ್ಧಪಡಿಸುವತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಗಮನಹರಿಸಿದೆ ಎಂದು ತಿಳಿಸಿದರು.
ಉದ್ದೇಶಿತ ಯೋಜನೆಯಲ್ಲಿ ಏನಿರಲಿದೆ?: ನವ ಮೈಸೂರು ನಿರ್ಮಾಣ ಯೋಜನೆಗೆ ಪ್ರಮುಖವಾಗಿ ಐದು ಆಧಾರಸ್ತಂಭಗಳನ್ನು ಗುರುತಿಸಲಾಗಿದೆ. ಉದ್ಯಮ ಮೈಸೂರು, ನಿಪುಣ ಮೈಸೂರು, ಸುಖೀವಾಸ ಮೈಸೂರು, ಪ್ರವಾಸೋದ್ಯಮ ಮೈಸೂರು ಮತ್ತು ಸಂಚಾರ ಮೈಸೂರು ಎಂಬ ಪ್ರಮುಖವಾದ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸುವ ಉದ್ದೇಶವನ್ನು ಹೊಂದಲಾಗಿದೆ ಎಂದು ಸಚಿವರು ತಿಳಿಸಿದರು.
ಉದ್ಯಮ ಮೈಸೂರು ಕ್ಷೇತ್ರದ ಯೋಜನೆಯಲ್ಲಿ ಅತ್ಯಾಧುನಿಕ ಉತ್ಪಾದನಾ ಹಬ್ ಸ್ಥಾಪನೆ ಮಾಡುವುದು, ಒಟ್ಟಾರೆ ಈ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವುದು. ನಿಪುಣ ಮೈಸೂರು ವಲಯವನ್ನು ಸ್ಥಾಪಿಸಿ ಇದರ ಮೂಲಕ ಕೌಶಲ್ಯ ತರಬೇತಿ ಮತ್ತು ಕೌಶಲ್ಯಾಧಾರಿತ ಉದ್ಯೋಗಗಳಿಗೆ ಆದ್ಯತೆ ನೀಡುವುದು, ಉದ್ಯಮಶೀಲತ್ವ ವಿಶ್ವವಿದ್ಯಾಲಯ ಸ್ಥಾಪನೆ ಮಾಡುವುದು.
ಸುಖೀವಾಸದಡಿಯಲ್ಲಿ ಸುಸಜ್ಜಿತವಾದ ಸಮಗ್ರ ಟೆಕ್ ಸಿಟಿ ನಿರ್ಮಾಣ, ಪ್ರವಾಸೋದ್ಯಮ ಮೈಸೂರು ಅಡಿಯಲ್ಲಿ ಸಮಗ್ರ ಆರೋಗ್ಯ, ಕ್ಷೇಮ ಮತ್ತು ಪುನಶ್ಚೇತನ ಕೇಂದ್ರದ ಆರಂಭ ಮತ್ತು ಸಂಚಾರ ಮೈಸೂರು ಎಂಬ ಹೆಸರಿನ ಯೋಜನೆಯಡಿ ಮೈಸೂರು ರ್ಯಾಪಿಡ್ ಮೆಟ್ರೋ ಯೋಜನೆ ಪ್ರಸ್ತಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕ-ಖಾಸಗಿ ಸಹಭಾಗಿತ್ವ: ಈ ಸಮಗ್ರ ಯೋಜನೆಯನ್ನು ಪಿಪಿಪಿ ಮಾದರಿಯಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹೀಗಾಗಿ ಸರ್ಕಾರದ ಮೇಲೆ ಯಾವುದೇ ಆರ್ಥಿಕ ಹೊರೆ ಬೀಳುವುದಿಲ್ಲ. ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ಅನುಷ್ಠಾನಕ್ಕೆ ತಂದು ಸಾಂಸ್ಕೃತಿಕ ನಗರವನ್ನು ಸಮಗ್ರ ಅಭಿವೃದ್ಧಿಪಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಸಚಿವರು ತಿಳಿಸಿದರು.
ಬಂಡವಾಳ ಆಕರ್ಷಣೆಯ ಪ್ರಮುಖ ನಗರ: ಬಂಡವಾಳ ಹೂಡಿಕೆಯಲ್ಲಿ ಬೆಂಗಳೂರಿನ ನಂತರದ ಸ್ಥಾನದಲ್ಲಿ ಮೈಸೂರು ನಗರವಿದ್ದು, ಇಲ್ಲಿ ಹೂಡಿಕೆಯಾಗುತ್ತಿರುವ ಬಂಡವಾಳದ ಮೊತ್ತ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಬಂಡವಾಳ ಹೂಡಿಕೆಗೆ ನೆಚ್ಚಿನ ತಾಣವಾಗಿದ್ದು, ಉದ್ಯಮಿಗಳನ್ನು ಆಕರ್ಷಿಸುವ ದಿಸೆಯಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಸರ್ಕಾರದಿಂದ ಸಹಕಾರ: ಯಾವುದೇ ತೊಂದರೆ ಇಲ್ಲದೇ ಉದ್ಯಮಗಳನ್ನು ಸ್ಥಾಪಿಸಲು ಹೂಡಿಕೆದಾರರಿಗೆ ತ್ವರಿತವಾಗಿ ಭೂಮಿ ಹಂಚಿಕೆ, ಆವಿಷ್ಕಾರ ಆಧಾರಿತ ನೀತಿಗಳನ್ನು ರೂಪಿಸುವುದು ಮತ್ತು ಮೂಲಸೌಕರ್ಯ ಹೂಡಿಕೆಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿದೆ ಎಂದು ತಿಳಿಸಿದರು.