
ತಕ್ಷಣ ದುರಸ್ಥಿಗೆ ಅಧಿಕಾರಿಗಳಿಗೆ ನಗರಸಭಾಧ್ಯಕ್ಷೆ ಸೂಚನೆ
ಪುತ್ತೂರು: ನಗರಸಭೆಯ ವ್ಯಾಪ್ತಿಯಲ್ಲಿನ ಬಹುಪಾಲು ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿರುವ ಹಿನ್ನಲೆಯಲ್ಲಿ ನಗರಸಭೆಯ ಅಧ್ಯಕ್ಷರ ನೇತೃತ್ವದಲ್ಲಿ ರಸ್ತೆ ವೀಕ್ಷಣಾ ಕಾರ್ಯಕ್ರಮ ಬುಧವಾರ ನಡೆಯಿತು.
ನಗರಸಭೆಯ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಹಾಗೂ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು.
ವಾಡಿಕೆಗಿಂತ ಹೆಚ್ಚು ಮಳೆ ಸುರಿದ ಪರಿಣಾಮ ನಗರದ ಮುಖ್ಯ ರಸ್ತೆಯೂ ಸೇರಿದಂತೆ ಬಹುತೇಕ ಎಲ್ಲಾ ರಸ್ತೆಗಳು ಹೊಂಡಗುಂಡಿಗಳ ತಾಣವಾಗಿ ಪರಿವರ್ತನೆಯಾಗಿವೆ. ಇದರಿಂದ ಸುಗಮ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಈ ಹೊಂಡಗುಂಡಿಗಳನ್ನು ತಕ್ಷಣ ಮುಚ್ಚುವ ಕಾಮಗಾರಿ ನಡೆಸುವಂತೆ ಅಧ್ಯಕ್ಷರು ನಗರಸಭೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೇ ತಿಂಗಳಿನಿಂದಲೇ ಮಳೆ ಬಿಡುವಿಲ್ಲದೆ ಸುರಿದಿದ್ದರಿಂದ ರಸ್ತೆಗಳು ಹದಗೆಟ್ಟಿದೆ. ಹೀಗಾಗಿ, ಹದಗೆಟ್ಟ ರಸ್ತೆಗಳು ಹಾಳಾಗಿ ಹೊಂಡ ಗುಂಡಿಗಳಾಗಿ ಸಂಚಾರಕ್ಕೆ ಅಡ್ಡಿಯಾಗಿವೆ. ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿದರೂ ಮತ್ತೆ ಗುಂಡಿಗಳು ಬಾಯಿ ತೆರೆಯುತ್ತಿವೆ. ಹಾಗಾಗಿ ದರ್ಬೆಯಲ್ಲಿ ಈಗಾಗಲೇ ಇಂಟರ್ಲಾಕ್ ಅಳವಡಿಸಿದ್ದರೂ ಅಲ್ಲಿ ಮತ್ತೆ ದುರಸ್ಥಿ ಕಾರ್ಯ ನಡೆಯುತ್ತಿದೆ. ಮಳೆಯ ಅವಾಂತರದಿಂದ ರಸ್ತೆ ದುರಸ್ಥಿ ಕಾರ್ಯಕ್ಕೆ ತೊಂದರೆ ಉಂಟಾಗಿದೆ. ಇದೀಗ ಮಳೆ ಕಡಿಮೆಯಾಗಿದ್ದು, ತಕ್ಷಣ ದುರಸ್ಥಿ ಕಾರ್ಯ ಆರಂಭವಾಗಲಿದೆ ಎಂದು ಅಧ್ಯಕ್ಷೆ ಲೀಲಾವತಿ ಅಣ್ಣುನಾಯ್ಕ್ ಅವರು ಮಾಧ್ಯಮಕ್ಕೆ ತಿಳಿಸಿದರು.
ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆ ಅವರು ಮಾತನಾಡಿ, ಈ ವರ್ಷದ ಮಳೆಯಿಂದಾಗಿ ಪುತ್ತೂರಿನಲ್ಲಿ ಮಾತ್ರವಲ್ಲ ಎಲ್ಲಾ ಕಡೆ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಇದನ್ನು ದುರಸ್ಥಿ ಪಡಿಸುವ ನಿಟ್ಟಿನಲ್ಲಿ ಅಧ್ಯಕ್ಷರ ನಿರ್ದೇಶನದಂತೆ ನಗರಸಭೆ ತಾಂತ್ರಿಕ ತಂಡದೊಂದಿಗೆ ಬಂದಿದ್ದೇವೆ. ಬಿಸಿಲು ಬಂದಾಕ್ಷಣ ನಗರಸಭೆ ದುರಸ್ಥಿಗೆ ಮುತುವರ್ಜಿ ವಹಿಸಿಲ್ಲ ಎಂಬುದು ಸಾರ್ವಜನಿಕರಲ್ಲಿ ಅಭಿಪ್ರಾಯವಿದೆ. ಆದರೆ ತಕ್ಷಣಕ್ಕೆ ಡಾಮರು ಹಾಕಿದರೂ ನಿಲ್ಲುವದಿಲ್ಲ. ಯಾಕೆಂದರೆ ಮೇಲಿನ ಪದರ ಒಣಗಿರಬಹುದು. ಒಳಗಡೆ ತೇವಾಂಶ ಇರುತ್ತದೆ. ಹಾಗಾಗಿ ತಕ್ಷಣಕ್ಕೆ ತಾಂತ್ರಿಕವಾಗಿ ಹೇಗೆ ದುರಸ್ಥಿ ಮಾಡಬಹುದು ಎಂಬುದನ್ನು ತಾಂತ್ರಿಕ ಇಂಜಿನಿಯರ್ಗಳು ಸೂಚನೆಯಂತೆ ನಗರಸಭೆ ಮುಖ್ಯರಸ್ತೆ ಸಹಿತ ಒಳರಸ್ತೆಯ ಮೇಜರ್ ಕೆಲಸ ನಡೆಸಲಾಗುತ್ತದೆ ಎಂದವರು ತಿಳಿಸಿದರು. ಈ ಸಂದರ್ಭ ತಾಂತ್ರಿಕ ತಂಡವಾದ ನಗರಸಭೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶಬರೀನಾಥ ರೈ, ಇಂಜಿನಿಯರ್ ಕೃಷ್ಣಮೂರ್ತಿ ಮತ್ತು ಮನೋಜ್ ಭಾಗವಹಿಸಿದ್ದರು.