
ಸುಳ್ಯ:ಯುವಕನೋರ್ವನ ಮೃತದೇಹ ಶೌಚಾಲಯದೊಳಗೆ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಸುಬ್ರಹ್ಮಣ್ಯ ಠಾಣಾ ವ್ಯಾಪ್ತಿಯ ಗುತ್ತಿಗಾರು ಗ್ರಾಮದ ಅಡ್ಡನಪಾರೆಯಲ್ಲಿ ನಡೆದಿದೆ.
ಅಡ್ಡನಪಾರೆ ಗೋಪಾಲ ನಾಯ್ಕ ಎಂಬವರ ಪುತ್ರ ಮಹಾಬಲ (೨೭) ಮೃತರು. ಮಹಾಬಲ ಅವರು ಫೆ.೪ರಂದು ರಾತ್ರಿ ಅಮಲು ಪದಾರ್ಥ ಸೇವಿಸಿ, ಮನೆಗೆ ಬಂದು ತನ್ನ ಮನೆಗೆ ಬೆಂಕಿ ಹಚ್ಚಿ ಅಲ್ಲಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ. ಮನೆಗೆ ಬೆಂಕಿ ಹಚ್ಚಿದ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅವರ ತಂದೆ ಗೋಪಾಲ ನಾಯ್ಕ ಅವರು ದೂರು ನೀಡಿದ್ದರು. ನಾಪತ್ತೆಯಾಗಿದ್ದ ಮಹಾಬಲ ಅವರ ಮೃತದೇಹ ಅವರ ಮನೆಯ ಬಳಿಯಿಂದ ಅರ್ಧ ಕಿ. ಮೀ. ದೂರದ ವಾಸವಿಲ್ಲದ ಮನೆಯೊಂದರ ಶೌಚಾಲಯದ ಗುರುವಾರ ಸಂಜೆ ಪತ್ತೆಯಾಗಿದೆ. ಸ್ಥಳೀಯ ಮನೆಯವರು ವಾಸನೆ ಬರುತ್ತಿರುವುದನ್ನು ಗಮನಿಸಿ, ಶೌಚಾಲಯದೊಳಗೆ ನೋಡಿದಾಗ ಮೃತದೇಹ ಕಂಡುಬಂದಿದೆ. ಬಳಿಕ ಅವರ ಮನೆಯವರಿಗೆ ವಿಷಯ ತಿಳಿಸಿ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ವಿಷಯ ತಿಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ. ಮೃತರು ಅವಿವಾಹಿತನಾಗಿದ್ದು ತಂದೆ, ತಾಯಿ ಇದ್ದಾರೆ.































