
ಬೆಂಗಳೂರು.ಫೆ28: ಸೃಜನಶೀಲ ಲಾಭರಹಿತ ಸಂಸ್ಥೆ ಆಗಿರುವ ‘ಗೋಯಿಂಗ್ ಟು ಸ್ಕೂಲ್’ ಸಂಸ್ಥೆಯು ಕರ್ನಾಟಕ ಸರ್ಕಾರ, ಒರಾಕಲ್, ಬ್ರಿಟಿಷ್ ಟೆಲಿಕಾಂ (ಬಿಟಿ) ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್‍ಸಿ ಸಹಭಾಗಿತ್ವದಲ್ಲಿ ವಿನೂತನ ಕಾರ್ಯಕ್ರಮವಾದ ‘ಮ್ಯಾಚ್ ಡೇ’ಯನ್ನು ಅದ್ದೂರಿಯಾಗಿ ಆಯೋಜಿಸಿದ್ದ ಈ ಕಾರ್ಯಕ್ರಮ ಬೆಂಗಳೂರಿನ ಜೆ.ಪಿ. ನಗರದ ಜಯಪ್ರಕಾಶ್ ನಾರಾಯಣ್ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು.
ಮ್ಯಾಚ್ ಡೇ’ ಕಾರ್ಯಕ್ರಮದಲ್ಲಿ 2,000 ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಅವರ ಶಿಕ್ಷಕರು ಹಾಗೂ ಪಾಲುದಾರ ಸಂಸ್ಥೆಗಳ 100 ಸ್ವಯಂಸೇವಕರು ಪಾಲ್ಗೊಂಡರು. ಗುಲಾಬಿ ಮತ್ತು ಹಸಿರು ಬಣ್ಣದ ಫುಟ್‍ಬಾಲ್ ವೇದಿಕೆಯಲ್ಲಿ ನಡೆದ ಪ್ರಶ್ನೋತ್ತರ ಕಾರ್ಯಕ್ರಮಗಳಿಂದ ಹಿಡಿದು, ಒರಾಕಲ್ ಮತ್ತು ಬಿಟಿ ಗ್ರೂಪ್ ಸ್ವಯಂಸೇವಕರು ಮುನ್ನಡೆಸಿದ ಒಂಬತ್ತು ಕೋಡಿಂಗ್ ಸವಾಲುಗಳ ಟೆಂಟ್ ಗಳವರೆಗೆ ವಿವಿಧ ಕಾರ್ಯಕ್ರಮಗಳು ನಡೆದುವು. ಈ ಸಂದರ್ಭದಲ್ಲಿ ಎಲ್ಲಾ ಪಾಲುದಾರರು ಯುವಜನರೊಂದಿಗೆ ಸಂವಾದ ನಡೆಸಿದರು. ಬೆಂಗಳೂರು ಎಫ್‍ಸಿ ಮಹಿಳಾ ತಂಡವು ಕ್ರೀಡಾ ಶಕ್ತಿಯನ್ನು ಪ್ರದರ್ಶಿಸಿತು; ಇದು ನಮ್ಮೆಲ್ಲರನ್ನು ಒಟ್ಟಾಗಿ ಆಟವಾಡಲು, ಕಲಿಯಲು ಮತ್ತು ನಗರ ಮಟ್ಟದಲ್ಲಿ ಸಮಾನತೆ ಹೊಂದಲು ಹಾಗೂ ಬದಲಾವಣೆಗಾಗಿ ಸಿದ್ಧರಾಗಲು ಪ್ರೇರೇಪಿಸಿತು.
‘ಗೋಯಿಂಗ್ ಟು ಸ್ಕೂಲ್’ ಸಂಸ್ಥೆಯು ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡಿರುವ ತಿಳಿವಳಿಕಾ ಒಪ್ಪಂದದ ಭಾಗವಾಗಿ ಕರ್ನಾಟಕದ ಸರ್ಕಾರಿ ಶಾಲೆಗಳ 5 ರಿಂದ 10ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ಭವಿಷ್ಯಕ್ಕೆ ಒದಗುವ ಕ್ರಿಯಾತ್ಮಕ ಕೌಶಲ್ಯಗಳನ್ನು ಕಲಿಸುತ್ತಿದೆ. ಈ ಯೋಜನೆಯ ಭಾಗವಾಗಿ ಒರಾಕಲ್, ಬಿಟಿ ಗ್ರೂಪ್, ಬ್ರಿಟಿಷ್ ಏಷ್ಯನ್ ಟ್ರಸ್ಟ್ ಮತ್ತು ಬೆಂಗಳೂರು ಎಫ್‍ಸಿ ಸಹಭಾಗಿತ್ವದಲ್ಲಿ ‘ಹೆಣ್ಣುಮಕ್ಕಳಿಗಾಗಿ (ಗಂಡು ಮಕ್ಕಳಿಗೂ) ಹೊರಾಂಗಣ ಶಾಲೆ’ ಎಂಬ ಅಪೂರ್ವವಾದ ಕಾರ್ಯಕ್ರಮವನ್ನು ನಡೆಸುತ್ತಿದೆ.
ಈ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರು ಒಂದು ತರಗತಿಯಿಂದ ಇನ್ನೊಂದಕ್ಕೆ ಯಶಸ್ವಿಯಾಗಿ ಮುನ್ನಡೆಯಲು ಅಗತ್ಯವಿರುವ ಕೌಶಲ್ಯಗಳನ್ನು ಕಲಿಸಲು ವಿನ್ಯಾಸಗೊಳಿಸಲಾಗಿದೆ. ಇದು ಅವರು ಶಾಲಾ ಶಿಕ್ಷಣದ ನಂತರ ಉದ್ಯೋಗಾವಕಾಶ ಹೊಂದಲು ಅಥವಾ ನಗರದಲ್ಲಿ ತಮ್ಮದೇ ಆದ ಸುಸ್ಥಿರ ಉದ್ಯಮಗಳನ್ನು (ಸ್ಟಾರ್ಟಪ್) ಪ್ರಾರಂಭಿಸಲು ನೆರವಾಗಲಿದೆ.
ಮಕ್ಕಳ 36 ತಂಡಗಳು, ಆ ತಂಡಗಳೊಂದಿಗೆ ಇದ್ದ ಸ್ವಯಂಸೇವಕರೊಂದಿಗೆ ಡಿಜೆ, ಇಬ್ಬರು ನಿರೂಪಕರು ಮತ್ತು ಆಯಾ ಸುತ್ತಿನಲ್ಲಿ ಯಾವ ತಂಡ ಗೆದ್ದಿದೆ ಎಂದು ತೋರಿಸುವ ಎರಡು ಬೃಹತ್ ಲೀಡರ್ ಬೋರ್ಡ್‍ಗಳ ಸಮ್ಮುಖದಲ್ಲಿ ತಾಂತ್ರಿಕ ಮತ್ತು ಫುಟ್ ಬಾಲ್ ಸವಾಲುಗಳಲ್ಲಿ ಪಾಲ್ಗೊಂಡವು.






























