
ಬೆಂಗಳೂರು, ಮಾ. ೯- ಕರ್ನಾಟಕ ರಾಜ್ಯ ಮೈಸೂರು ರೇಷ್ಮೆ ಉದ್ಯಮ ನಿಗಮಕ್ಕೆ ಸೇರಿದ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಪ್ರಸ್ತಾವವನ್ನು ಕೈಬಿಡಲಾಗಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಕರ್ನಾಟಕ ರಾಜ್ಯ ರೇಷ್ಮೆ ನಿಗಮದ ಸೀರೆಗಳಿಗೆ ಹೆಚ್ಚುತ್ತಿರುವ ಬೇಡಿಕೆಗೆ ಸಂಬಂಧಿಸಿದಂತೆ ಬಿಜೆಪಿಯ ಶ್ರೀವತ್ಸ ಅವರು ಪ್ರಶ್ನೆ ಕೇಳಿದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿ, ರಾಜ್ಯದಲ್ಲಿ ದೊಡ್ಡ ಇತಿಹಾಸವಿರುವ ಹಾಗೂ ವಾರ್ಷಿಕವಾಗಿ ೯೬ ಕೋಟಿ ರೂ. ಲಾಭ ಮಾಡಿರುವ ಕರ್ನಾಟಕ ರಾಜ್ಯ ರೇಷ್ಮೆ ನಿಗಮವನ್ನು ಮುಚ್ಚಲು ಸರ್ಕಾರ ಮುಂದಾಗಿದೆ. ರೇಷ್ಮೆ ನಿಗಮದ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ತೀರ್ಮಾನ ಮಾಡಿದೆ. ಇದು ಸರಿಯಲ್ಲ. ಕೂಡಲೇ ಕ್ರೀಡಾಂಗಣ ನಿರ್ಮಾಣ ಮಾಡುವುದನ್ನು ಕೈಬಿಟ್ಟು ಕಾರ್ಖಾನೆಯನ್ನು ಉಳಿಸಿ ಎಂದು ಒತ್ತಾಯಿಸಿದ್ದರು.
ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಅವರ ಮಾತಿಗೆ ಉತ್ತರಿಸಿದ ಸಚಿವ ವೆಂಕಟೇಶ್, ಮೈಸೂರು ರೇಷ್ಮೆ ಕಾರ್ಖಾನೆ ಜಾಗದಲ್ಲಿ ಕ್ರೀಡಾಂಗಣ ಮಾಡುವ ಪ್ರಸ್ತಾವನನ್ನು ಕೈಬಿಟ್ಟಿದ್ದೇವೆ. ಕೆಲ ಅಧಿಕಾರಿಗಳು ಮುಖ್ಯಮಂತ್ರಿಗಳಿಗೆ ತಪ್ಪು ಮಾಹಿತಿ ನೀಡಿ ರೇಷ್ಮೆ ಕಾರ್ಖಾನೆಯ ಜಾಗದಲ್ಲಿ ಕ್ರೀಡಾಂಗಣ ನಿರ್ಮಣ ಮಾಡಬಹುದು ಎಂದು ಹೇಳಿದ್ದರು. ವಸ್ತುಸ್ಥಿತಿ ತಿಳಿದ ಮೇಲೆ ಮುಖ್ಯಮಂತ್ರಿಗಳು ಒಪ್ಪಿಲ್ಲ. ಕ್ರೀಡಾಂಗಣ ನಿರ್ಮಾಣ ಪ್ರಸ್ತಾವನನ್ನು ಕೈಬಿಡಲಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಸದಸ್ಯ ಶ್ರೀವತ್ಸ ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದ ಮೈಸೂರು ರೇಷ್ಮೆ ಸೀರೆಗಳಿಗೆ ಬೇಡಿಕೆ ಹೆಚ್ಚಿದೆ. ಆದರೆ, ಕಾರ್ಖಾನೆಗಳಲ್ಲಿ ದಿನಕ್ಕೆ ೩೦೦-೩೫೦ ಸೀರೆಗಳನ್ನು ಮಾತ್ರ ಉತ್ಪಾದಿಸಲಾಗುತ್ತಿದೆ. ಮೈಸೂರು ರೇಷ್ಮೆ ಸೀರೆಗಳು ಗುಣಮಟ್ಟಕ್ಕೆ ಹೆಸರಾಗಿವೆ. ಉತ್ತಮ ಗುಣಮಟ್ಟದ ರೇಷ್ಮೆ ಗೂಡುಗಳನ್ನು ಖರೀದಿಸಿ ಮೈಸೂರು ರೇಷ್ಮೆ ಸೀರೆಗಳನ್ನು ತಯಾರು ಮಾಡಲಾಗುತ್ತಿದೆ. ರೇಷ್ಮೆ ಗೂಡಿಗೂ ಹೆಚ್ಚಿನ ಬೇಡಿಕೆ ಇದೆ. ಸೀರೆಗಳಿಗೂ ಉತ್ತಮ ಬೇಡಿಕೆ ಇದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಯನ್ನು ವಿಸ್ತರಿಸಿ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಗುಣಮಟ್ಟದ ರೇಷ್ಮೆ ಸೀರೆಗಳನ್ನು ತಯಾರಿಸಲು ಏನೆಲ್ಲಾ ಮಾಡಬೇಕು ಅದನ್ನು ಮಾಡುತ್ತೇವೆ ಎಂದರು.
ಮೈಸೂರು ರೇಷ್ಮೆ ಸೀರೆಗೆ ಆನ್‌ಲೈನ್‌ನಲ್ಲೂ ಬೇಡಿಕೆ ಹೆಚ್ಚಿದ್ದು ಸ್ಥಳೀಯರಿಗೆ ರೇಷ್ಮೆ ಸೀರೆಗಳನ್ನು ನೀಡುವ ನಿಟ್ಟಿನಲ್ಲಿ ಆನ್‌ಲೈನ್ ಮಾರಾಟವನ್ನು ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಿದೆ ಎಂದು ಸಚಿವ ವೆಂಕಟೇಶ್ ಹೇಳಿದರು.
ಮೈಸೂರು ರೇಷ್ಮೆ ಕಾರ್ಖಾನೆಯಲ್ಲಿ ತರಬೇತಿ ಪಡೆಯುವ ನೇಕಾರರಿಗೆ ೩ ಸಾವಿರ ರೂ. ಮಾಸಿಕ ಗೌರವ ಧನ ನೀಡಲಾಗುತ್ತಿದೆ. ಪೂರ್ಣಾವಧಿ ನೌಕರರಿಗೆ ೧೫ ಸಾವಿರ ರೂ.ಗಳಷ್ಟು ವೇತನ ನೀಡಲಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.
ಈ ಹಂತದಲ್ಲಿ ನೇಕಾರರಿಗೆ ನೀಡುವ ವೇತವನ್ನು ಹೆಚ್ಚಿಸಿ ಎಂದು ಅಶೋಕ್ ಹೇಳಿ, ನಿಗಮ ೯೬ ಕೋಟಿ ಲಾಭ ಮಾಡಿದೆ. ಲಾಭದ ೧ ಕೋಟಿ ರೂ. ಗಳನ್ನು ನೇಕಾರರ ವೇತನ ಹೆಚ್ಚಿಸಲು ಬಳಸಿ ಎಂದು ಸಲಹೆ ಮಾಡಿದರು.

























