Home ಜಿಲ್ಲೆ ಮಂಗಳೂರು ಮಂಗಳೂರು: ಬಸ್ಸಿನ ಚಕ್ರಕ್ಕೆ ಸಿಲುಕಿ ಯುವತಿ ಮೃತ್ಯು

ಮಂಗಳೂರು: ಬಸ್ಸಿನ ಚಕ್ರಕ್ಕೆ ಸಿಲುಕಿ ಯುವತಿ ಮೃತ್ಯು

ಮಂಗಳೂರು: ನಗರದ ನಂತೂರು ಬಸ್ ನಿಲ್ದಾಣದ ಬಳಿ ಶನಿವಾರ ರಾತ್ರಿ ಖಾಸಗಿ ಬಸ್ ಮತ್ತು ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.


ಬುಧವಾರ ರಾತ್ರಿ ಸುಮಾರು ೭:೪೫ರ ವೇಳೆಗೆ ಈ ದುರ್ಘಟನೆ ಸಂಭವಿಸಿದೆ. ಕಿಶೋರ್ ಎಂಬವರು ತನ್ನ ಸ್ಕೂಟರ್ ನಲ್ಲಿ ದೀಪ್ತಿ (೨೬) ಎಂಬವರನ್ನು ಕರೆದುಕೊಂಡು ಬಲ್ಲಾಳ್‌ಭಾಗ್ ಕಡೆಯಿಂದ ವಾಮಂಜೂರು ಮಾರ್ಗವಾಗಿ ಸಂಚರಿಸುತ್ತಿದ್ದರು. ನಂತೂರು ಬಸ್ ನಿಲ್ದಾಣದ ಸಮೀಪ ತಲುಪಿದಾಗ, ಹಿಂದಿನಿಂದ ಅತೀ ವೇಗವಾಗಿ ಬಂದ ‘ಶ್ರೀ ಗಣೇಶ’ ಹೆಸರಿನ ಖಾಸಗಿ ಬಸ್ ಸ್ಕೂಟರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಕಿಶೋರ್ ರಸ್ತೆಯ ಬದಿಗೆ ಬಿದ್ದಿದ್ದಾರೆ. ಆದರೆ ಸ್ಕೂಟರ್‌ನ ಹಿಂಬದಿ ಕುಳಿತಿದ್ದ ದೀಪ್ತಿ ಅವರು ಬಸ್ಸಿನ ಮುಂಭಾಗದ ಚಕ್ರದ ಅಡಿ ಸಿಲುಕಿದ್ದಾರೆ. ಬಸ್ಸು ದೀಪ್ತಿ ಅವರನ್ನು ಸ್ವಲ್ಪ ದೂರದವರೆಗೆ ತಳ್ಳಿಕೊಂಡು ಹೋಗಿದ್ದು, ಇದರಿಂದಾಗಿ ಅವರ ಹೊಟ್ಟೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು.
ತಕ್ಷಣವೇ ಅವರನ್ನು ನಗರದ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ದೀಪ್ತಿ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.