Home ಜಿಲ್ಲೆ ಬೆಂಗಳೂರು ಬಿಡಿಎ ಒತ್ತುವರಿ ತೆರವಿಗೆ ನೌಕರರ ಸಂಘ ಅಧ್ಯಕ್ಷರಿಂದ ಅಡ್ಡಿ

ಬಿಡಿಎ ಒತ್ತುವರಿ ತೆರವಿಗೆ ನೌಕರರ ಸಂಘ ಅಧ್ಯಕ್ಷರಿಂದ ಅಡ್ಡಿ

ಬೆಂಗಳೂರು, ಫೆ.12: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವತ್ತಿನ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಬಿಡಿಎ ನೌಕರರ ಸಂಘದ ಅಧ್ಯಕ್ಷರಿಂದಲೇ ಅಧಿಕಾರಿಗಳಿಗೆ ಅಡ್ಡಿ ಉಂಟಾದ ಘಟನೆ ಬೆಳಕಿಗೆ ಬಂದಿದೆ. ಸರ್ಕಾರಿ ಜಾಗವನ್ನು ಕಾಪಾಡಬೇಕಾದ ನೌಕರನೇ ಭೂ ಒತ್ತುವರಿದಾರರ ಪರ ನಿಂತಿರುವುದು ಪ್ರಾಧಿಕಾರದಲ್ಲಿ ಚರ್ಚೆಗೆ ಗ್ರಾಸವಾಗಿದೆ.


ನಗರದ ಬೆಂಗಳೂರು ಅಗ್ರಹಾರ ದಾಸರಹಳ್ಳಿ ಸರ್ವೆ ನಂ.8ರಲ್ಲಿ ಬಿಡಿಎಗೆ ಸೇರಿದ ಜಾಗದಲ್ಲಿ ಒತ್ತುವರಿ ನಡೆದಿರುವ ಹಿನ್ನೆಲೆಯಲ್ಲಿ, ನಿಯಮಾನುಸಾರ ತೆರವು ಕಾರ್ಯಾಚರಣೆಗೆ ಬಿಡಿಎ ಇಂಜಿನಿಯರ್‍ಗಳು ಹಾಗೂ ಸಿಬ್ಬಂದಿ ತಂಡ ತೆರಳಿತ್ತು. ಈ ವೇಳೆ ಸ್ಥಳಕ್ಕೆ ನುಗ್ಗಿದ ಬಿಡಿಎ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಕಾರ್ಯಾಚರಣೆಗೆ ಅಡ್ಡಿಪಡಿಸಿ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರೆಂದು ತಿಳಿದು ಬಂದಿದೆ.
ತೆರವು ಕಾರ್ಯಾಚರಣೆಯನ್ನು ಮುನ್ನಡೆಸುತ್ತಿದ್ದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಬಾಗಿ ಅವರೊಂದಿಗೆ ಮಂಜುನಾಥ್ ತೀವ್ರ ಗಲಾಟೆ ನಡೆಸಿದ್ದು, ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ಭೂ ಒತ್ತುವರಿದಾರರ ಪರವಾಗಿ ನಿಂತು ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿದ ಆರೋಪವೂ ಕೇಳಿಬಂದಿದೆ.
ಸರ್ಕಾರಿ ಜಾಗ ಒತ್ತುವರಿ ತೆರವು ಕಾರ್ಯಾಚರಣೆಗೆ ಸರ್ಕಾರಿ ನೌಕರರೇ ಅಡ್ಡಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಬಿಡಿಎ ಸ್ವತ್ತಿನ ರಕ್ಷಣೆಗೆ ಮುಂದಾಗಬೇಕಾದ ನೌಕರರ ಸಂಘದ ಅಧ್ಯಕ್ಷರ ನಡೆಗೆ ತೀವ್ರ ಟೀಕೆ ವ್ಯಕ್ತವಾಗುತ್ತಿದೆ.


ಘಟನೆ ಕುರಿತು ಮಾಹಿತಿ ಪಡೆದ ಬಿಡಿಎ ಆಯುಕ್ತ ಮಣಿವಣ್ಣನ್, ಕಾರ್ಯಾಚರಣೆಗೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಮಂಜುನಾಥ್ ವಿರುದ್ಧ ಶೋಕಾಸ್ ನೋಟಿಸ್ ನೀಡುವಂತೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ನಿಯಮ ಉಲ್ಲಂಘನೆ ನಡೆದಿರುವ ಕುರಿತು ವಿವರವಾದ ವರದಿ ಪಡೆಯಲು ಕೂಡ ಸೂಚನೆ ನೀಡಲಾಗಿದೆ.
ಬಿಡಿಎ ಮಾನಹಾನಿಗೆ ಕಾರಣವಾದ ಈ ಘಟನೆ ಹಿನ್ನೆಲೆಯಲ್ಲಿ, ಸಂಬಂಧಪಟ್ಟವರ ವಿರುದ್ಧ ಸೂಕ್ತ ಶಿಸ್ತು ಕ್ರಮ ಜರುಗಿಸಬೇಕೆಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಮುಂದಿನ ಕ್ರಮದತ್ತ ಎಲ್ಲರ ಕಣ್ಣು ನೆಟ್ಟಿದೆ.