
ಟ್ರೇಲರ್ ಮೂಲಕ ಕುತೂಹಲ ಕೆರಳಿಸಿರುವ ‘ಮರಳಿ ಮನಸಾಗಿದೆ’ ಚಿತ್ರ ಫೆಬ್ರವರಿ 12ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಬೆನಕ ಟಾಕೀಸ್ ಲಾಂಛನದಲ್ಲಿ ಮುದೇಗೌಡ ನವೀನ್ ಕುಮಾರ್ ಆರ್.ಓ, ತೆಲಿಗಿ ಮಲ್ಲಿಕಾರ್ಜುನಪ್ಪ, ನಾಗರಾಜ್ ಶಂಕರ್ ಹಾಗೂ ಆಶಿತ್ ಸುಬ್ರಹ್ಮಣ್ಯ ನಿರ್ಮಿಸಿರುವ ಈ ಚಿತ್ರವನ್ನು ನಾಗರಾಜ್ ಶಂಕರ್ ನಿರ್ದೇಶಿಸಿದ್ದು, ಅರ್ಜುನ್ ವೇದಾಂತ್ ನಾಯಕನಾಗಿ ನಟಿಸಿದ್ದಾರೆ.
ಬಿಡುಗಡೆಗೂ ಮುನ್ನ ಬೆಂಗಳೂರು, ಪುತ್ತೂರು, ಉಡುಪಿ ಸೇರಿದಂತೆ ಎಂಟು ಕಡೆ ಪೇಡ್ ಪ್ರಿಮಿಯರ್ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “ಹತ್ತು ವರ್ಷಗಳ ಬಳಿಕ ನಾನು ನಟಿಸಿರುವ ಕನ್ನಡ ಚಿತ್ರ ಇದು” ಎಂದು ಅರ್ಜುನ್ ವೇದಾಂತ್ ತಿಳಿಸಿದ್ದಾರೆ.
ನಿರೀಕ್ಷಾ ಶೆಟ್ಟಿ, ಸ್ಮೃತಿ ವೆಂಕಟೇಶ್, ಗಿರೀಶ್ ಜತ್ತಿ, ಟಿ.ಎಸ್. ನಾಗಾಭರಣ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಸಂಗೀತ ವಿನು ಮನಸು ಅವರದು. ಪ್ರೇಮಕಥೆಯೊಂದಿಗೆ ಭಾವನಾತ್ಮಕ ಅಂಶಗಳನ್ನು ಒಳಗೊಂಡ ಚಿತ್ರವಿದು ಎಂದು ಚಿತ್ರತಂಡ ತಿಳಿಸಿದೆ.




























