
ಪುತ್ತೂರು- ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೈಕಾರ ಇದರ ಶತಮಾನೋತ್ಸವ ಸಮಾರಂಭವು ಫೆ.೧೪ ಮತ್ತು ೧೫ ರಂದು ವಿವಿಧ ಕಾರ್ಯಕ್ರಮಗಳ ಸಂಯೋಜನೆಯೊಂದಿಗೆ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿ ಸಂಚಾಲಕ ಸೀತಾರಾಮ ರೈ ಚೆಲ್ಯಡ್ಕ ಹೇಳಿದರು.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿ, ಶತಮಾನೋತ್ಸವದ ನೆನಪಿನಲ್ಲಿ ರೂ.೫೦ ಲಕ್ಷ ವೆಚ್ಚದಲ್ಲಿ ಶತಮಾನೋತ್ಸವಭವನ ಉದ್ಘಾಟನೆ ಹಾಗೂ ನೂತನ ಕ್ರೀಡಾಂಗಣ, ಆವರಣಗೋಡೆ, ರಂಗ ಮಂದಿರ ನಿರ್ಮಾಣ ವ್ಯವಸ್ಥೆಗಳು ಲೋಕಾರ್ಪಣೆಗೊಳ್ಳಲಿದೆ. ಫೆ.೧೪ರಂದು ೧೦.೩೦ಕ್ಕೆ ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಆರಂಭವಾಗಿದೆ. ಸಂಜೆ.೫.೩೦ಕ್ಕೆ
ಸಭಾಕಾರ್ಯಕ್ರಮ ಶಾಸಕ ಅಶೋಕ್ ರೈ ಅವರ ಅಧ್ಯಕ್ಷತೆಯಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ದೀಪಪ್ರಜ್ವಲನೆ ಮಾಡಲಿದ್ದಾರೆ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಮರಣಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಸಂಸದ ಬ್ರಿಜೇಶ್ ಚೌಟ ಬಹುಮಾನ ವಿತರಣೆ ನಡೆಸಲಿದ್ದಾರೆ. ಉದ್ಯಮಿ ಕನ್ಯಾನ ಸದಾಶಿವ ಶೆಟ್ಟಿ ೧೦೦ ಮಂದಿ ಸಾಧಕರಾದ ಹಿರಿಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸನ್ಮಾನಿಸಲಿದ್ದಾರೆ. ಎಂಆರ್‌ಪಿಎಲ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಶತಮಾನೋತ್ಸವ ಸಾಂಸ್ಕೃತಿಕ ಭವನ ಉದ್ಘಾಟಿಸಲಿದ್ದಾರೆ. ವಿಜಯ ಮಂಜುನಾಥ ಶೆಟ್ಟಿ ಕೈಕಾರ ಅವರು ಪನಡ್ಕ ಮಂಜುನಾಥ ಶೆಟ್ಟಿ ವೇದಿಕೆಯನ್ನು ಉದ್ಘಾಟಿಸಲಿದ್ದಾರೆ. ಮುಂಡಪಳ್ಳ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತಸರ ಕೆ.ಕೆ.ಶೆಟ್ಟಿ ಅವರು ಕೈಕಾರ ಕುಸುಮ ಸುಬ್ಬಣ್ಣ ಶೆಟ್ಟಿ ರಂಗಮಂದಿರವನ್ನು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು, ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಒಳಮೊಗ್ರು ಗ್ರಾ.ಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಅತಿಥಿಗಳಾಗಿ ಭಾವಹಿಸಲಿದ್ದಾರೆ.
. ಫೆ.೧೫ಕ್ಕೆ ಮಧ್ಯಾಹ್ನ ಗಂಟೆ ೧೨ ಕ್ಕೆ ಸಭಾ ಕಾರ್ಯಕ್ರಮದಲ್ಲಿ ಶತಮಾನೋತ್ಸವ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಆದರ್ಶ ಆಸ್ಪತ್ರೆಯ ಡಾ. ಎಂ.ಕೆ.ಪ್ರಸಾದ್ ಅವರು ಬಹುಮಾನ ವಿತರಿಸಲಿದ್ದಾರೆ. ದೈಹಿಕ ಶಿಕ್ಷಣ ಪರಿವೀಕ್ಷಕ ಚಕ್ರಪಾಣಿ, ಕ್ಷೇತ್ರ ಶಿಕ್ಷಣ ಸಮನ್ವಯ ಅಧಿಕಾರಿ ನವೀನ್ ವೇಗಸ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಜೆ ಗಂಟೆ ೫ಕ್ಕೆ ಶತಮಾನೋತ್ಸವ ಕಾರ್ಯಕ್ರಮದ ಸಮಾರೋಪ ನಡೆಯಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಭೋಜೇ ಗೌಡ, ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಸಂಜೀವ ಮಠಂದೂರು ಮತ್ತು ಮಲ್ಲಿಕಾ ಪ್ರಸಾದ್ ಭಾಗವಹಿಸಲಿದ್ದಾರೆ.
ಶಾಲಾ ಮಕ್ಕಳಿಂದ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಗೀತಾ ಸಾಹಿತ್ಯ ಸಂಭ್ರಮ, ದ್ವಿಕಂಠ ಸಿರಿ ಗಾಯನ, ವಿಭಿನ್ನ ಶೈಲಿಯ ನೃತ್ಯ ಕಾರ್ಯಕ್ರಮ, ನೃತ್ಯ ವೈಭವ, ತುಳು ನಾಟಕ ಯಕ್ಷಗಾನ ಶತಮಾನೋತ್ಸವದ ವಿಶೇಷ ಆಕರ್ಷಣೆಯಾಗಿದೆ. ಶತಮಾನೋತ್ಸವದ ನೆನಪಿನಲ್ಲಿ ಆಂಗ್ಲಮಾಧ್ಯಮ ತರಗತಿ ಸರ್ಕಾರದ ಅನುಮೋದನೆಯೊಂದಿಗೆ ಪ್ರಾರಂಭವಾಗಿದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಕೈಕಾರ ಶಾಲಾ ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ಶಿವರಾಮ ಶೆಟ್ಟಿ ಶಿವಸದನ, ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಪ್ರಭಾರ ಮುಖ್ಯಗುರು ರಾಮಣ್ಣ ರೈ, ಎಲ್.ಕೆ.ಜಿ.-ಯು.ಕೆ.ಜಿ ಬೆಟರ್‌ಮೆಂಟ್ ಕಮಿಟಿಯ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.































