
‘ವೀರ ಕಂಬಳ’ ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ!
ತುಳುನಾಡಿನ ಸಂಸ್ಕೃತಿ, ಪರಂಪರೆ ಮತ್ತು ವೀರತ್ವದ ಪ್ರತೀಕವಾಗಿರುವ ಕಂಬಳವನ್ನು ಕೇಂದ್ರೀಕರಿಸಿಕೊಂಡ ಬಹುನಿರೀಕ್ಷಿತ ‘ವೀರ ಕಂಬಳ’ ಚಿತ್ರದ ಟ್ರೈಲರ್ ಬಿಡುಗಡೆಗೊಂಡಿದ್ದು ಸಿನಿ ವಲಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಕನಸಿನ ಈ ಚಿತ್ರ ದಶಕಗಳ ಪರಿಶ್ರಮದ ಫಲವಾಗಿ ಮೂಡಿ ಬಂದಿದ್ದು, ಕಂಬಳದ ಇತಿಹಾಸ, ಸಂಪ್ರದಾಯ ಹಾಗೂ ಅದಕ್ಕೆ ಜೋಡಿಸಿರುವ ರೋಚಕ ಕಥನವನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸುವ ಪ್ರಯತ್ನ ಮಾಡಲಾಗಿದೆ. ಈ ಟ್ರೈಲರ್ ಅನ್ನು ನಾದಬ್ರಹ್ಮ ಹಂಸಲೇಖ ಬಿಡುಗಡೆಗೊಳಿಸಿದ್ದು, ಇದೇ ಸಂದರ್ಭದಲ್ಲಿ ತುಳು ಆವೃತ್ತಿಯಾದ ‘ಬಿರ್ದ್‌ದ ಕಂಬುಳ’ ಟ್ರೈಲರ್ ಕೂಡ ಅನಾವರಣಗೊಂಡಿತು.
ಟ್ರೈಲರ್ ಬಿಡುಗಡೆ ಮಾಡಿದ ಹಂಸಲೇಖ ಅ ಮಾತನಾಡಿ, “ಕಲೆ ಎಂದರೆ ಸದಾ ಯುವತೆಯಂತಿರುವ ಶಕ್ತಿ. ಅದು ಮನುಷ್ಯನನ್ನು ಜೀವಂತವಾಗಿರಿಸುತ್ತದೆ. ವೀರತ್ವದ ಸಂಕೇತವಾದ ಕಂಬಳಕ್ಕೆ ಕಲೆಯ ತಾಂಬೂಲ ನೀಡಿರುವಂತೆ ‘ವೀರ ಕಂಬಳ’ ಮೂಡಿಬಂದಿದೆ” ಎಂದು ಪ್ರಶಂಸಿಸಿದರು. ತುಳುನಾಡಿನ ನೆಲದ ಸುವಾಸನೆಯನ್ನು ಕಳೆದುಕೊಳ್ಳದೇ ಚಿತ್ರಕಥೆಗೆ ಜೀವ ತುಂಬಿರುವ ನಿರ್ದೇಶಕರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಚಿತ್ರದ ಹುಟ್ಟುಹಾದಿ ಕುರಿತು ಮಾತನಾಡಿದ ರಾಜೇಂದ್ರ ಸಿಂಗ್ ಬಾಬು, ಕಂಬಳವನ್ನು ದೃಶ್ಯ ರೂಪಕ್ಕೆ ತರಲು ಹಲವು ವರ್ಷಗಳ ಅಧ್ಯಯನ ಹಾಗೂ ಪರಿಶ್ರಮ ಅಗತ್ಯವಾಯಿತು ಎಂದು ತಿಳಿಸಿದರು. ಕಂಬಳದ ಸುತ್ತ ಮೂಡಿರುವ ರೋಚಕ ಕಥೆಯಲ್ಲಿ ಮುಂಬೈ ಭೂಗತ ಜಗತ್ತಿನ ನಂಟಿರುವ ಅಂಶಗಳೂ ಸೇರಿದ್ದು, ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ ಎಂಬ ಸುಳಿವು ನೀಡಿದರು.
ಬಾಬಾ’ಸ್ ಬ್ಲೆಸಿಂಗ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಡಾ. ವಿನಿತ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಾಜೇಶ್ ಕುಡ್ಲ ಕಾರ್ಯಕಾರಿ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ನಾಯಕನಾಗಿ ಆದಿತ್ಯ ಅಭಿನಯಿಸಿದ್ದು, ಜೊತೆಗೆ ಪ್ರಕಾಶ್ ರೈ ಮತ್ತು ರವಿಶಂಕರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಜೀವ ತುಂಬಿದ್ದಾರೆ. ತುಳು ಆವೃತ್ತಿಯಲ್ಲಿಯೂ ಬಿಡುಗಡೆಗೊಳ್ಳಲಿರುವ ಈ ಚಿತ್ರದಲ್ಲಿ ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಸೇರಿದಂತೆ ತುಳು ರಂಗಭೂಮಿಯ ಪ್ರಸಿದ್ಧ ಕಲಾವಿದರು ಅಭಿನಯಿಸಿದ್ದಾರೆ.
ಚಿತ್ರಕಥೆ ಮತ್ತು ಸಂಭಾಷಣೆಯನ್ನು ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಬರೆದಿದ್ದು, ಸಂಗೀತವನ್ನು ಮಣಿಕಾಂತ್ ಕದ್ರಿ ನೀಡಿದ್ದಾರೆ. ಛಾಯಾಗ್ರಹಣವನ್ನು ಆರ್. ಗಿರಿ, ಸಂಕಲನವನ್ನು ಶ್ರೀನಿವಾಸ್ ಎಸ್ ಬಾಬು, ಕಲಾ ನಿರ್ದೇಶನವನ್ನು ಚಂದ್ರಶೇಖರ್ ಸುವರ್ಣ ಮುಲ್ಕಿ ಮಾಡಿದ್ದಾರೆ. ವಸ್ತ್ರ ವಿನ್ಯಾಸವನ್ನು ಕಾಂತ ಪ್ರಸಾದನ ಮತ್ತು ಭಾಷಾ ನಿರ್ವಹಿಸಿದ್ದಾರೆ.ತುಳುನಾಡಿನ ಸಂಸ್ಕೃತಿಯನ್ನು ವಿಶ್ವ ಮಟ್ಟಕ್ಕೆ ತಲುಪಿಸುವ ಉದ್ದೇಶ ಹೊಂದಿರುವ ‘ವೀರ ಕಂಬಳ’ ಚಿತ್ರ ಫೆಬ್ರವರಿ 27ರಂದು ತೆರೆಗೆ ಬರಲಿದ್ದು, ಪ್ರೇಕ್ಷಕರಲ್ಲಿ ದೊಡ್ಡ ನಿರೀಕ್ಷೆ ಮೂಡಿಸಿದೆ.




























